ಸಚಿವ ಮಂಕಾಳ ವೈದ್ಯ ಮಾತನಾಡಿದರು. ಕಾರವಾರ:''ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಕಾರ್ಯಕರ್ತರವರೆಗೂ ಒಂದು ಸತ್ಯವನ್ನು ಹೇಳಿಲ್ಲ. ಇದೀಗ ಎಂಪಿ ಚುನಾವಣೆ ಬಂದಿದ್ದು, ಈಗ ಯಾರನ್ನಾದರು ಕೊಲೆ ಮಾಡದೇ ಇದ್ದರೇ ಸಾಕು'' ಎಂದು ಸಚಿವ ಮಂಕಾಳ್ ವೈದ್ಯ ಟೀಕಿಸಿದ್ದಾರೆ.
ಕಾರವಾರದಲ್ಲಿ ಇಂದು (ಶನಿವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಈಶ್ವರಪ್ಪ ಅವರು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ''ಈಶ್ವರಪ್ಪ ಅವರಿಗೆ ಮೊದಲು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಹೇಳಿ. ಅವರ ಯೋಗ್ಯತೆಗೆ ವಿರೋಧ ಪಕ್ಷದ ನಾಯಕರನ್ನು ಮಾಡಲು ಆಗಿಲ್ಲ. ಅವರು ಏನು ನಮಗೆ ಬುದ್ದಿ ಹೇಳುವುದು. ಈಶ್ವರಪ್ಪ ಅವರ ಹೆಸರು ಹೇಳಿ ಉಡುಪಿಗೆ ಬಂದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು. ಅವರು ಎಷ್ಟು ಹೊತ್ತಿಗೆ ಏನು ಮಾತಾಡ್ತಾರೆ ಎಂಬುದು ಅವರಿಗೇ ಗೊತ್ತಿರಲ್ಲ. ಅವರು ಐದು ವರ್ಷ ಅವರ ಪಕ್ಷದ ವಿರುದ್ಧವೇ ಮಾತನಾಡಿದವರು'' ಎಂದು ಕಿಡಿಕಾರಿದರು.
ಸಿಎಂ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು:ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಮುಖ್ಯಮಂತ್ರಿ ಯಾರಾಗ್ತಾರೆ, ಎಷ್ಟು ವರ್ಷ ಆಗ್ತಾರೆ ಎನ್ನುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಪಕ್ಷಕ್ಕೆ 136 ಸ್ಥಾನದಲ್ಲಿ ಗೆಲ್ಲಿಸಿ ಐದು ವರ್ಷ ಅಧಿಕಾರ ನಡೆಸಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಸಿಎಂ ಯಾರನ್ನು ಯಾವಾಗ ಮಾಡುತ್ತಾರೆ ಎನ್ನುವ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು ಎಂದಿದ್ದಾರೆ.
ಮುಖ್ಯಮಂತ್ರಿಗಳ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ವಿಶೇಷ ಏನೂ ಇಲ್ಲ:ಮಾಜಿ ಮುಖ್ಯಮಂತ್ರಿ ಬಿಜೆಪಿ ಮುಖಂಡ ಎಸ್. ಎಂ. ಕೃಷ್ಣ ಅವರು ಸಿದ್ದರಾಮಯ್ಯ ನಾನೇ ಸಿಎಂ ಎನ್ನುವ ಹೇಳಿಕೆಗೆ ಟೀಕೆ ಮಾಡಿರುವ ಕುರಿತು ಮಾತನಾಡಿದ ಮಂಕಾಳ ವೈದ್ಯ ಅವರು, ''ಎಸ್.ಎಂ. ಕೃಷ್ಣ ಅವರಿಗೆ ಕಾಂಗ್ರೆಸ್ ತವರು ಮನೆ ಇದ್ದಂತೆ. ನಮ್ಮ ಪಕ್ಷದಲ್ಲೇ ಇದ್ದು ಸಿಎಂ ಆದವರು. ಅವರ ಮೇಲೆ ತನಗೆ ಗೌರವವಿದೆ. ಅವರ ಅನುಭವದ ಮೇಲೆ ಸಲಹೆಯನ್ನ ನೀಡಿದ್ದಾರೆ. ತಪ್ಪು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿಗಳ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಏನು ವಿಶೇಷತೆ ಇಲ್ಲ. ನಮಗೂ ಆಹ್ವಾನ ನೀಡಿದ್ದರು. ಆದರೆ, ಕೆಡಿಪಿ ಸಭೆ ಹಿನ್ನೆಲೆಯಲ್ಲಿ ಹೋಗಲು ಆಗಲಿಲ್ಲ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸಿಎಂ ಹೇಳಿಕೆ ನಡುವೆಯೇ ಸಿದ್ದರಾಮಯ್ಯ- ಸಚಿವರ ಬ್ರೇಕ್ ಫಾಸ್ಟ್ ಸಭೆ: ಗೊಂದಲ ನಿವಾರಣೆಗೆ ಯತ್ನ