ಕಾರವಾರ: ಗೋ ಹತ್ಯೆ ಕಾನೂನು ಇದ್ದರೂ ಗೋ ಕಳ್ಳತನ ನಡೆಯುತ್ತಿದೆ. ಸರ್ಕಾರ ಸದ್ಯದಲ್ಲಿಯೇ ಇನ್ನಷ್ಟು ಕಠಿಣ ಕಾನೂನು ಕ್ರಮಗಳೊಂದಿಗೆ ಗೊಹತ್ಯೆ ನಿಷೇಧ ಜಾರಿಗೆ ತರಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ನಮ್ಮ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿತ್ತು. ಆದರೆ, ಅಂದು ಅದನ್ನು ಗರ್ವನರ್ ತಿರಸ್ಕರಿಸಿದ್ದರು. ಈಗ ಇನ್ನಷ್ಟು ಬೀಗಿ ಕಾನೂನುಗಳನ್ನು ಸೇರಿಸಿ ಗೋ ಹತ್ಯೆ ಕಾನೂನು ತರಲು ತೀರ್ಮಾನ ಮಾಡಿದ್ದೇವೆ. ಇದಕ್ಕೆ ಬೇಕಾದ ಸಿದ್ದತೆಯನ್ನು ಈಗಾಗಲೇ ಪಶುಸಂಗೋಪನಾ ಇಲಾಖೆ ಮಾಡುತ್ತಿದೆ. ನಂತರ ಕಾನೂನು ಇಲಾಖೆಯಲ್ಲಿ ಹಾಗೂ ಪಾರ್ಲಿಮೆಂಟ್ನಲ್ಲಿ ಮಂಡಿಸಿ ಕಾನೂನು ತರಲಾಗುವುದು ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ಸದ್ಯ ಗೋಹತ್ಯೆ ಕಾನೂನು ಇದ್ದರೂ ಗೋ ಕಳ್ಳ ಸಾಗಾಣೆ ಮಾಡುವ ದಂಧೆ ದೊಡ್ಡ ಪ್ರಮಾಣದಲ್ಲಿ ನಡಿಯುತ್ತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇರುವ ಗೋಹತ್ಯಾ ನಿಷೇಧ ಸಮಿತಿಯನ್ನು ಪುನರ್ ರಚನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಹಿಂದೆ ವರದಕ್ಷಿಣೆ ಇತ್ತು. ಆದರೆ, ಯಾವುದೇ ಕಾನೂನು ಇರಲಿಲ್ಲ. ಆದರೆ, ಯಾವಾಗ ವರದಕ್ಷಿಣೆ ಹೆಸರಿನಲ್ಲಿ ಸಾವುಗಳು ಪ್ರಾರಂಭವಾಯಿತೋ ಆಗ ವರದಕ್ಷಿಣೆ ಕಾನೂನು ಜಾರಿಗೆ ತರಲಾಗಿತ್ತು. ಅದರಂತೆ ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಹೆಚ್ಚಾಗಿದ್ದು, ಮತಾಂತರ ಪ್ರಕರಣಗಳು ಬೆಳಕಿಗೆ ಬಂದಿದೆ. ಯುಪಿ ಹಾಗೂ ಇನ್ನಿತರ ಕಡೆ ಇಂತಹ ಪ್ರಕರಣಗಳನ್ನು ತಡೆಯಲು ಪ್ರಯತ್ನ ಮಾಡುತ್ತಿರುವ ಕಾನೂನಿನ ಬಗ್ಗೆ ನಾವು ತಿಳಿದುಕೊಳ್ಳುತ್ತಿದ್ದು, ಈ ಬಗ್ಗೆ ಸದ್ಯದಲ್ಲಿಯೇ ಕಠಿಣ ಕಾನೂನು ಜಾರಿಗೆ ತರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.