ಕಾರವಾರ (ಉತ್ತರಕನ್ನಡ): ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಹಮಾಸ್ ಉಗ್ರ ನಡುವಿನ ಸಂಘರ್ಷ ಮುಂದುವರೆದಿದ್ದು, ಅಪಾರ ಸಂಖ್ಯೆಯ ಸಾವು ನೋವು ಸಂಭವಿಸಿದೆ. ಯುದ್ಧಪೀಡಿತ ಇಸ್ರೇಲ್‌ನಲ್ಲಿ ಭಾರತದ ಸಾವಿರಾರು ಮಂದಿ ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಜಿಲ್ಲೆಯಿಂದಲೂ ಹಲವು ಮಂದಿ ಉದ್ಯೋಗ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಇಸ್ರೇಲ್ನಲ್ಲಿದ್ದಾರೆ. ಅಲ್ಲಿನ ಯುದ್ಧ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿರುವ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತ ತೆರೆದಿರುವ ಸಹಾಯವಾಣಿಗೆ ಕರೆಗಳು ಬರಲಾರಂಭಿಸಿದ್ದು, ತಮ್ಮವರನ್ನು ಸುರಕ್ಷಿತವಾಗಿ ಕರೆ ತರುವಂತೆ ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ.
ಜಿಲ್ಲೆಯ ಕಾರವಾರ, ಹೊನ್ನಾವರ, ಅಂಕೋಲಾ, ಭಟ್ಕಳ ಸೇರಿದಂತೆ ವಿವಿಧೆಡೆಯಿಂದ ಹಲವು ಜನರು ಇಸ್ರೇಲ್‌ನಲ್ಲಿ ವಿವಿಧ ಉದ್ಯೋಗ ಮಾಡುತ್ತಿದ್ದಾರೆ. ಆದರೆ, ಈವರೆಗೂ ಎಷ್ಟು ಜನರಿದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸದ್ಯ ಸಹಾಯವಾಣಿ ಮೂಲಕ ಮಾಹಿತಿ ನೀಡಿದ್ದವರನ್ನು ಸಂಪರ್ಕ ಮಾಡಲು ಪ್ರಯತ್ನ ನಡೆಸುತ್ತಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.
ಇಸ್ರೇಲ್‌ನಲ್ಲಿ ಉತ್ತರ ಕನ್ನಡದ ಹೋಂ ನರ್ಸ್ :ನಗರದ ಬೈತಖೋಲ ನಿವಾಸಿ ರೋಝರ್ ಲೋಪೇಜ್ ಪತ್ನಿ ಕ್ರಿಸ್ತಮಾ ಕಳೆದ ಏಳು ವರ್ಷಗಳಿಂದ ಇಸ್ರೇಲ್‌ನ ತೆಲವಿಯಲ್ಲಿ ಹೋಂನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾವಿರುವ ಅಪಾರ್ಟ್ಮೆಂಟ್‌ನ ನೆಲಮಾಳಿಗೆಯಲ್ಲೇ ಬಂಕರ್ ವ್ಯವಸ್ಥೆಯಿದ್ದು, ತಾವು ಸುರಕ್ಷಿತವಾಗಿರುವುದಾಗಿ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕ್ರಿಸ್ತಮಾ ಅವರು ಕಳೆದ ವರ್ಷವಷ್ಟೇ ಮನೆಗೆ ಬಂದು ಹೋಗಿದ್ದರು. ಸದ್ಯ ಇಸ್ರೇಲ್‌ನ ಯುದ್ಧಪೀಡಿತ ಪ್ರದೇಶದಿಂದ ದೂರದಲಿದ್ದಾರೆ. ಯುದ್ಧದ ಸಮಸ್ಯೆಗಳು ಹೆಚ್ಚಾದಲ್ಲಿ ಸರ್ಕಾರ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಬೇಕು ಎಂದು ಪತಿ ರೋಝೆರ್ ಲೋಪೇಜ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.