ಕಾರವಾರ :ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಉತ್ತರಕನ್ನಡ ಜಿಲ್ಲೆ ಧಾರ್ಮಿಕ ತಾಣಗಳ ಜತೆಗೆ ವಿಶಾಲವಾದ ಕಡಲತೀರ, ಜಲಸಾಹಸ ಕ್ರೀಡೆಗಳು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ.
ಆದ್ರೆ, ಇಂತಹ ತಾಣದ ಮೇಲೆ ಇದೀಗ ಉಗ್ರರ ಕೆಂಗಣ್ಣು ಬಿದ್ದಿದೆ ಎನ್ನುವ ವಿಚಾರ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುರ್ಡೇಶ್ವರದ ಶಿವನ ಪ್ರತಿಮೆ ವಿಕೃತಗೊಳಿಸಿದ ಫೊಟೋವನ್ನ ಐಸಿಸ್‌ನ ಮ್ಯಾಗಜಿನ್‌ನ ಕವರ್ ಪೇಜ್‌ಗೆ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಐಸಿಸ್‌ನ ಮ್ಯಾಗಜೀನ್ 'ದಿ ವೈಸ್ ಆಫ್ ಹಿಂದ್'ನ ಕವರ್ ಪೇಜ್‌ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಫೋಟೋ ಹಾಕಿದ್ದು, ಅದರ ಮೇಲೆ 'Its time to Break False Gods' ಎಂಬ ಬರಹ ಮುದ್ರಿಸಲಾಗಿದೆ. ಜತೆಗೆ ಶಿವನ ಪ್ರತಿಮೆಯ ತುತ್ತ ತುದಿಗೆ ಐಸಿಸ್ ಧ್ವಜ ಹಾರಾಡುತ್ತಿರುವಂತೆ ಆಕ್ಷೇಪಾರ್ಹ ಚಿತ್ರವನ್ನು ಪ್ರಕಟಿಸಿದೆ.
ಸಾರ್ವಜನಿಕರ ಆಕ್ರೋಶ :ಈ ಪೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಅನ್ಶುಲ್ ಸಕ್ಸೇನಾ ಎಂಬುವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು, ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಈ ವಿಚಾರ ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದು, ಉಗ್ರರ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸೇಡು ತೀರಿಸಿಕೊಳ್ಳಲು ಸಜ್ಜಾಗಿರುವ ಶಂಕೆ :ಆಗಸ್ಟ್ ತಿಂಗಳಿನಲ್ಲಿ ಭಟ್ಕಳದ ಜಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬು ಹಾಜಿರ್ ಅಲ್ ಬದರಿಯನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಂಘಟಿತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಬಂಧಿಸಿತ್ತು.