ಕಾರವಾರ: ಕೋವಿಡ್ 2ನೇ ಅಲೆಯ ಅಬ್ಬರ ಹಾಗೂ ವರುಣಾರ್ಭಟದಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಪ್ರಾರಂಭಗೊಂಡಿವೆ. ಅದರಲ್ಲೂ ಕಾರವಾರ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಫ್ಲೈಓವರ್ ನಿರ್ಮಾಣ ಕಾಮಗಾರಿಯೂ ಭರದಿಂದ ಸಾಗುತ್ತಿದೆ.
ಆದ್ರೆ, ಕಾಮಗಾರಿಯಲ್ಲಿ ಕಾರ್ಮಿಕರು ಮಾತ್ರ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಕೆಲಸ ಮಾಡುತ್ತಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ.
ನಗರಕ್ಕೆ ಹೊಂದಿಕೊಂಡೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ಕಾರಣಕ್ಕೆ ಫ್ಲೈ ಓವರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ನಗರದ ಲಂಡನ್ ಬ್ರಿಡ್ಜ್‌ನಿಂದ ಆರ್.ಟಿ.ಒ ಕಚೇರಿವರೆಗೆ ಸುಮಾರು 1.4 ಕಿ.ಮೀ ಉದ್ದದ ಫ್ಲೈಓವರ್ ಕೆಲಸ ನಡೆಯುತ್ತಿದೆ. ಕೊರೊನಾ 2ನೇ ಅಲೆಯ ಬಳಿಕ ಸ್ಥಗಿತಗೊಂಡಿದ್ದ ಈ ಕಾಮಗಾರಿ ಸದ್ಯ ಪುನರಾರಂಭಗೊಂಡಿದೆ.
ಆದ್ರೆ, ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಯಾವುದೇ ಸುರಕ್ಷತೆ ವಹಿಸುತ್ತಿಲ್ಲ. ಕಾಮಗಾರಿಯ ವಸ್ತುಗಳನ್ನು ಹೆದ್ದಾರಿಯ ಅಕ್ಕಪಕ್ಕ ಎಲ್ಲೆಂದರಲ್ಲಿ ಇಟ್ಟಿದ್ದಾರೆ. ಒಂದೆಡೆ ಕಾರ್ಮಿಕರು ಅಪಾಯಕಾರಿಯಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಇನ್ನೊಂದೆಡೆ ರಸ್ತೆಯಲ್ಲಿ ಸಂಚರಿಸುವ ಸವಾರರು ಓಡಾಡಲು ಪರದಾಡಬೇಕಾದ ಪರಿಸ್ಥಿತಿ ಇದೆ. ಫ್ಲೈ ಓವರ್ ಕಾಮಗಾರಿ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಕಾರ್ಮಿಕರು ಸೇರಿದಂತೆ ವಾಹನ ಸವಾರರಿಗೂ ಸಹ ಅಪಾಯ ಎದುರಾಗುವ ಆತಂಕದ ವಾತಾವರಣ ಇದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.