ಕಾರವಾರ: ಜಿಲ್ಲೆಯಲ್ಲಿ 102 ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ 2020-21ನೇ ಸಾಲಿನ ಕೊರೊನಾ ಬ್ಯಾಚ್ನ ವಿದ್ಯಾರ್ಥಿಗಳಿಂದ ಇತರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಪಿಯುಸಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಗ್ರಾಮ ಲೆಕ್ಕಿಗ ಹುದ್ದೆಗೆ ನೇರ ನೇಮಕವಾಗುತ್ತಾರೆ. ಗ್ರಾಮ ಲೆಕ್ಕಿಗ ಹುದ್ದೆಗೆ ಬೇರೆ ಯಾವುದೇ ಪರೀಕ್ಷೆ ನಡೆಯುವುದಿಲ್ಲ. 102 ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಸುಮಾರು 41,162 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇರ ನೇಮಕಾತಿ-ಪ್ರತಿಕ್ರಿಯೆ ಹೀಗಿದೆ.. 2020-21ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆ ಮಾಡಲಾಗದೇ ಸರ್ಕಾರ ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿ ಅಂಕಗಳನ್ನು ಇಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಿತ್ತು. ಇದರಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಶೇ100ಕ್ಕೆ 100ರಷ್ಟು ಅಂಕ ಪಡೆದಿದ್ದರು. ಸದ್ಯ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಿದ 87 ವಿದ್ಯಾರ್ಥಿಗಳು ಶೇ100ಕ್ಕೆ 100 ಅಂಕ ಪಡೆದಿದ್ದು, ಇತರೆ ಬ್ಯಾಚ್ನವರಿಗೆ ಅನ್ಯಾಯವಾಗುತ್ತಿದೆಯೆಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ಹಾವೇರಿ: ಭಾರತೀಯ ಶೈಲಿ ಮಣ್ಣಿನ ಕುಸ್ತಿ ಪೈಲ್ವಾನರ ಸಂಘ ಉದ್ಘಾಟನೆ
ಕೊರೊನಾ ಬ್ಯಾಚ್ನ ವಿದ್ಯಾರ್ಥಿಗಳಿಗೆ ಸುಲಭವಾಗಿ ಶೇ 100, 99ರಷ್ಟು ಅಂಕಗಳು ದೊರೆತಿದ್ದು, ನೇರ ನೇಮಕಾತಿಯಲ್ಲಿ ಬಹುತೇಕ ಎಲ್ಲಾ ಕೊರೊನಾ ಬ್ಯಾಚಿನ ವಿದ್ಯಾರ್ಥಿಗಳೇ ನೇಮಕವಾಗಲಿದ್ದಾರೆ. ಕಷ್ಟಪಟ್ಟು ಪರೀಕ್ಷೆ ಬರೆದು ಅಂಕ ಪಡೆದವರು ಈ ಕೆಲಸದ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಗ್ರಾಮ ಲೆಕ್ಕಿಗ ಹುದ್ದೆಗಳಿಗೂ ನೇಮಕಾತಿ ಪರೀಕ್ಷೆ ನಡೆಸಬೇಕೆನ್ನುವುದು ಸ್ಥಳೀಯರ ಆಗ್ರಹ.