ಶಿರಸಿ:ತಾಲ್ಲೂಕಿನ ಬಿಸಲಕೊಪ್ಪ, ಬದನಗೋಡ, ಭಾಶಿ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ್ದ ಪ್ರಕರಣದಡಿ ಹಾಗೂ ಅಂತರ್ ಜಿಲ್ಲಾ ದೇವಸ್ಥಾನದ ಕಳ್ಳತನದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಶಿರಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶೃಗೇರಿಯ ಶ್ರೀಧರ ಬಂಡಿವಡ್ಡರ, ಅಬ್ದುಲ್ ಶೇಖ್, ಮೊಹಮ್ಮದ ಜನಗೇರಿ ಮತ್ತು ಕಳವು ಮಾಡುತ್ತಿದ್ದ ವಸ್ತು ಖರೀದಿಸುತ್ತಿದ್ದ ಬೆಳಗಲಪೇಟೆಯ ಸಂಜೀವ ಕೊರಗರ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 20 ಸಾವಿರ ಮೌಲ್ಯದ ವಸ್ತುಗಳು, ದ್ವಿಚಕ್ರ ವಾಹನ ಮತ್ತು ಕಾರು ವಶಕ್ಕೆ ಪಡೆಯಲಾಗಿದೆ.
ಕಳೆದ ವರ್ಷ ಜುಲೈನಲ್ಲಿ ಬಿಸಲಕೊಪ್ಪದ ಅಂಗನವಾಡಿಯಲ್ಲಿ ನಡೆದಿದ್ದ ಕಳ್ಳತನದ ತನಿಖೆ ವೇಳೆ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ವಿಚಾರಣೆ ಬಳಿಕ ಇವರು ನೆರೆಯ ಹಾವೇರಿ ಜಿಲ್ಲೆಯ ಹಾನಗಲ್, ಆಡೂರು, ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲೂ ಕಳ್ಳತನ ನಡೆಸಿರುವುದರ ಬಗ್ಗೆ ಮಾಹಿತಿ ಲಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದ ತಂಡದಲ್ಲಿ ಗ್ರಾಮೀಣ ಠಾಣೆಯ ಮಹಾದೇವ ನಾಯ್ಕ, ಪ್ರದೀಪ ರೇವಣಕರ, ಬಸವರಾಜ ಮ್ಯಾಗೇರಿ, ರಮೇಶ ಮುಚ್ಚಂಡಿ, ಕುಬೇರಪ್ಪ ದೊಡ್ಡಮನಿ, ಸುರೇಶ ಕಟ್ಟಿ, ಗಣಪತಿ ನಾಯ್ಕ, ಕೊಟೇಶ ನಾಗರವಳ್ಳಿ, ಚಾಲಕ ಶ್ರೀಧರ ನಾಯ್ಕ ಇದ್ದರು.