ಶಿರಸಿ:ಅಂತರ್ಜಾತಿ ವಿವಾಹವಾಗಿದ್ದ ಯುವಕನಿಂದ ಯುವತಿಯನ್ನು ಬೇರ್ಪಡಿಸಲು ಎರಡೂ ಕುಟುಂಬಗಳು ಬಡಿದಾಡಿಕೊಂಡು ಯುವಕನ ಕುಟುಂಬದ ಆರು ಜನರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿಯ ಯುವತಿ ಜತೆಗೆಕೃಷ್ಣ ಚೆನ್ನಯ್ಯ ಎಂಬ ಬನವಾಸಿಯ ಯುವಕ ಫೇಸ್ ಬುಕ್ನಲ್ಲಿ ಪರಿಚಯವಾಗಿದ್ದ.ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಯುವತಿಯನ್ನು ಕೃಷ್ಣ ಎಂಟು ದಿನದ ಹಿಂದೆ ಬೆಂಗಳೂರಿನಲ್ಲಿ ಮದುವೆಯೂ ಆಗಿದ್ದ. ಯುವತಿಯ ಕುಟುಂಬದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಬಡಿದಾಡಿಕೊಂಡ ಎರಡು ಕುಟುಂಬಸ್ಥರು ಇಬ್ಬರೂ ಮದುವೆಯಾಗಿದ್ದಕ್ಕೆ ಯಾವುದೇ ಅಧಿಕೃತ ದಾಖಲೆ ಇರದ ಹಿನ್ನೆಲೆಯಲ್ಲಿ ಇಬ್ಬರು ಮದುವೆಯಾಗಿ ಬನವಾಸಿಯ ತಮ್ಮ ಮನೆಗೆ ಬಂದಿದ್ದ ವಿಷಯವನ್ನು ಅರಿತು ಯುವತಿಯ ಚಿಕ್ಕಪ್ಪನಾದ ಹೊಳಿಯಪ್ಪ ಎಂಬಾತನ ಕುಟುಂಬ ಹಾಗೂ ಸಂಬಂಧಿಗಳೊಂದಿಗೆ ಬನವಾಸಿಗೆ ತೆರಳಿ ಯುವತಿಯನ್ನು ಅಪಹರಿಸಿ ತರುವ ಪ್ರಯತ್ನ ಮಾಡಿದ್ರು ಎನ್ನಲಾಗ್ತಿದೆ.
ಈ ವೇಳೆ ನವಜೋಡಿಗಳು ಮನೆಯಲ್ಲಿಲ್ಲದ ಕಾರಣ ಯುವಕನ ಸಹೋದರ ಹಾಗೂ ಮಾವನಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಎರಡೂ ಕುಟುಂಬದವರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಯುವಕನ ಸಹೋದರ ಹಾಗೂ ಮಾವನಿಗೆ ಮಚ್ಚಿನಿಂದ ಹೊಡೆದಿದ್ದು ಬೆರಳುಗಳು ತುಂಡಾಗಿವೆ.
ಒಟ್ಟು ಆರು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಬನವಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಎರಡೂ ಕುಟುಂಬದ ವಿರುದ್ಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.