ಭಟ್ಕಳ:ನಾಳೆ ನಡೆಯುವ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಪಿಎಸ್ಐ ಭರತ್ ಅಧ್ಯಕ್ಷತೆಯಲ್ಲಿ ವಿವಿಧ ಸಮುದಾಯದ ಮುಖಂಡರ ಶಾಂತಿ ಸಭೆಯನ್ನ ನಗರ ಠಾಣೆಯಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಪಿಎಸ್ಐ ಭರತ್ ಕುಮಾರ್ ಮಾತನಾಡಿ, ಕೋವಿಡ್ ಮಾರ್ಗಸೂಚಿಗಳನ್ನು ಈ ಬಾರಿ ಹಬ್ಬಗಳಲ್ಲಿ ಪಾಲಿಸಬೇಕಿದ್ದು, ಯಾವುದೇ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ, ಗುಂಪು ಗುಂಪಾಗಿ ಸೇರಲು ಅವಕಾಶ ಇರುವುದಿಲ್ಲ. ಹಬ್ಬ ಹರಿದಿನಗಳು ಧಾರ್ಮಿಕ ಆಚರಣೆಯಾಗಿದ್ದು, ವೈಯಕ್ತಿಕವಾಗಿ ತಮ್ಮ ಮನೆಗಳಲ್ಲಿಯೇ ಭಕ್ತಿಯಿಂದ ಆಚರಿಸಿ ಎಂದು ಕರೆ ನೀಡಿದರು.
ಭಟ್ಕಳದಲ್ಲಿ ಈದ್ ಮಿಲಾದ್ ಸರಳವಾಗಿ ಆಚರಿಸುವಂತೆ ಪಿಎಸ್ಐ ಸೂಚನೆ ನಂತರ ಸಭೆಯಲ್ಲಿ ಹಾಜರಿದ್ದ ನಾರಾಯಣ ನಾಯ್ಕ ಮುಂಡಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖಗೊಂಡಿದ್ದು, ಈ ಬಾರಿ ನಡೆಯುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಅತ್ಯಂತ ಸರಳವಾಗಿ ಹಾಗೂ ಜಾಗರೂಕತೆಯಿಂದ ಆಚರಣೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರಾದ ಇಸ್ಮಾಯಿಲ್ ಫಾರುಕಿ ಮಾತನಾಡಿ, ಈದ್ ಮಿಲಾದ್ ಹಬ್ಬಗಳನ್ನು ಎಲ್ಲರೂ ಸಹೋದರ ಮನೋಭಾವದ ಜೊತೆಗೆ ಸಾಮರಸ್ಯ ಹಾಗೂ ಭಾವೈಕ್ಯತೆಯಿಂದ ಆಚರಿಸಲಾಗುವುದು. ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.
ಇದೇ ಸಮಯದಲ್ಲಿ ಈದ್ ಮಿಲಾದ್ ತಾಲೂಕು ಸಮಿತಿಯ ಮುಖಂಡರು ಹಬ್ಬದ ದಿನ ಒಳಾಂಗಣ ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದರು. ಇದಕ್ಕೆ ಪಿಎಸ್ಐ ಭರತ್ ಕುಮಾರ್ ಈ ಬಗ್ಗೆ ತಾಲೂಕಾಡಳಿತದೊಂದಿಗೆ ಚರ್ಚಿಸಿ ತಿಳಿಸಲಾಗುವುದು ಎಂದರು.