ಕಾರವಾರ (ಉತ್ತರ ಕನ್ನಡ): ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಇದೇ ಮೊದಲ ಬಾರಿಗೆ ಕಾರವಾರದ ಕದಂಬ ನೌಕಾಲೆನೆಗೆ ಆಗಮಿಸಿದೆ. ಕಳೆದ ವರ್ಷ ಕೊಚ್ಚಿನ್ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಂಡಿದ್ದ ಭಾರತದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಐಎನ್‌ಎಸ್ ವಿಕ್ರಾಂತ್ ನೌಕೆ ಇದೇ ಮೊದಲ ಬಾರಿಗೆ ಕದಂಬ ನೌಕಾನೆಲೆಯ ಹಡಗು ತಂಗುದಾಣಕ್ಕೆ ಬಂದು ಸೇರಿದೆ.
ಐಎನ್‌ಎಸ್ ವಿಕ್ರಮಾದಿತ್ಯದ ಜೊತೆಗೆ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯನ್ನು ಕಾರವಾರದ ಕದಂಬ ನೌಕಾನೆಲೆಯಲ್ಲಿ ಎರಡು ಪ್ರತ್ಯೇಕ ನಿಲ್ದಾಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ 11 ಪ್ರಮುಖ ಯುದ್ಧ ನೌಕೆಗಳು ಇಲ್ಲಿರುವುದು ಹೊಸ ಮೈಲುಗಲ್ಲಿಗೆ ಸಾಕ್ಷಿಯಾಗಿದೆ.
ನೌಕಾಪಡೆ ಇತಿಹಾಸದಲ್ಲಿಯೇ ಅತೀ ದೊಡ್ಡ ಹಡಗು ಐಎನ್‌ಎಸ್ ವಿಕ್ರಾಂತ್:ಐಎನ್‌ಎಸ್ ವಿಕ್ರಾಂತ್ ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂಎಸ್‌ಎಂಇಗಳು ಒದಗಿಸಿದ ದೇಶೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ. ಇದು ಭಾರತದ ನೌಕಾಪಡೆ ಇತಿಹಾಸದಲ್ಲಿ ನಿರ್ಮಿಸಲಾದ ಅತಿದೊಡ್ಡ ಹಡಗು ಮತ್ತು ಅತ್ಯಾಧುನಿಕ ಯಾಂತ್ರೀಕೃತ ವೈಶಿಷ್ಟ್ಯಗಳನ್ನು ಹೊಂದಿದೆ.
ಕೇರಳದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ನಲ್ಲಿ ನಿರ್ಮಿಸಲಾಗಿರುವ ಐಎನ್‌ಎಸ್ ವಿಕ್ರಾಂತ್ 40,000 ಟನ್ ತೂಕ ಹೊಂದಿದ್ದು, 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲವಿದೆ. ಐಎನ್ಎಸ್ ವಿಕ್ರಾಂತ್ ನಿವೃತ್ತವಾದ ಬಳಿಕ ಮತ್ತು ಐಎನ್ಎಸ್ ವಿಕ್ರಮಾದಿತ್ಯ ಆಗಮನದ ನಂತರ 1997ರ ಜನವರಿಯಲ್ಲಿ ಈ ಸ್ವದೇಶಿ ವಿಕ್ರಾಂತ್ ನಿರ್ಮಿಸುವ ಯೋಜನೆಯನ್ನು ಯೋಜಿಸಿ ಕಳೆದ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು.