ಕರ್ನಾಟಕ

karnataka

ETV Bharat / state

15 ವಸಂತ ಪೂರೈಸಿದ ಐಎನ್ಎಸ್ ಚಾಪೆಲ್ ಮ್ಯೂಸಿಯಂ: ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಯುದ್ಧನೌಕೆ - 15 ವಸಂತಗಳನ್ನ ಪೂರೈಸಿದ ಐಎನ್ಎಸ್ ಚಾಪೆಲ್ ಮ್ಯೂಸಿಯಂ

ಪ್ರವಾಸಿಗರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿದ್ದ ಚಾಪೆಲ್ ಯುದ್ಧ ನೌಕೆ (INS Chapel Battleship) ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹೆಚ್ಚಿನ ಗಮನಹರಿಸಿ ಇದನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

chapel battleship suffering from lack of maintenance
ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಐಎನ್ಎಸ್ ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯ

By

Published : Nov 14, 2021, 12:37 PM IST

ಕಾರವಾರ:ಐಎನ್ಎಸ್ ಚಾಪೆಲ್ (INS Chapel Battleship). ಇದುಭಾರತೀಯ ನೌಕಾಪಡೆಯ ಯುದ್ದಗಳಲ್ಲಿ ಸಕ್ರಿಯವಾಗಿದ್ದ ಯುದ್ದ ನೌಕೆ. ಮಾತ್ರವಲ್ಲ, ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮುಂಚೂಣಿಯಲ್ಲಿದ್ದು ಸೇನೆಗೆ ತನ್ನದೆ ರೀತಿಯ ಸೇವೆ ಸಲ್ಲಿಸಿದೆ. 2005ರಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದು, ಕಾರವಾರದಲ್ಲಿ ಮ್ಯೂಸಿಯಂ ಆಗಿ ಮಾರ್ಪಡಿಸಲಾಗಿದೆ.


ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಐಎನ್ಎಸ್ ಚಾಪೆಲ್ ಸ್ಥಾಪನೆಗೊಂಡು ಇಂದಿಗೆ (ನ.14) 15 ವಸಂತ ಪೂರೈಸುತ್ತಿದೆ. ದುರದೃಷ್ಟವಶಾತ್, ನಿವೃತ್ತಿ ಬಳಿಕವೂ ಲಕ್ಷಾಂತರ ರೂ. ಆದಾಯ ತರುತ್ತಿದ್ದ ನೌಕೆಯು ಸೂಕ್ತ ನಿರ್ವಹಣೆ (Lack of maintenance)ಇಲ್ಲದೆ ಸೊರಗುವಂತಾಗಿದೆ.

1976ರಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸೇರ್ಪಡೆ

ಭಾರತೀಯ ನೌಕಾಪಡೆಯಲ್ಲಿ 29 ವರ್ಷಗಳ ಸುದೀರ್ಘ ಸೇವೆಯ ಬಳಿಕ 2005ರ ಮೇ ತಿಂಗಳಲ್ಲಿ ಐಎನ್ಎಸ್ ಚಾಪೆಲ್ (ವಿಮಾನವಾಹಕ ಯುದ್ಧ ನೌಕೆ) ನಿವೃತ್ತಿಯಾಗಿದೆ. ಕ್ಷಿಪಣಿ ಉಡಾವಣೆ ವ್ಯವಸ್ಥೆ ಹೊಂದಿರುವ ರಷ್ಯಾ ನಿರ್ಮಿತ ನೌಕೆಯನ್ನು 1976ರ ನ. 4ರಂದು ಭಾರತೀಯ ನೌಕಾಪಡೆಯ ಸೇವೆಗೆ ಸೇರ್ಪಡೆಗೊಳಿಸಲಾಗಿತ್ತು.

1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಕರಾಚಿ ಬಂದರಿನ ಮೇಲೆ ಬಾಂಬ್ ದಾಳಿ ಮಾಡಲು ಮತ್ತು ಅರಬ್ಬಿ ಸಮುದ್ರದಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಚಾಪೆಲ್ ಬಹುಮುಖ್ಯ ಪಾತ್ರವಹಿಸಿತ್ತು. ಇದು ಪಾಕಿಸ್ತಾನದ ವಾಣಿಜ್ಯ ರಾಜಧಾನಿಯನ್ನು ದುರ್ಬಲಗೊಳಿಸಿ, ಭಾರತದ ಅಂತಿಮ ವಿಜಯದಲ್ಲಿ ನೆರವಾಗಿತ್ತು. ಈ ಚಾಪೆಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇಬ್ಬರು ಸಿಬ್ಬಂದಿ ಪರಮವೀರ ಚಕ್ರ ಮತ್ತು 8 ವೀರ ಚಕ್ರ ಗಳನ್ನು ಪಡೆದಿರುವುದು ಈಗ ಇತಿಹಾಸ.

ಟ್ಯಾಗೋರ್ ಕಡಲ ತೀರದಲ್ಲಿ ಮ್ಯೂಸಿಯಂ ಆಗಿ ಸ್ಥಾಪನೆ

29 ವರ್ಷಗಳ ಸಾರ್ಥಕ ದೇಶ ಸೇವೆಯ ಬಳಿಕ 2005ರ ಮೇ 5ರಂದು ಇದನ್ನು ನಿವೃತ್ತಿಗೊಳಿಸಲಾಯಿತು. ನಂತರ ಒಂದು ವರ್ಷದ ಬಳಿಕ ಕಾರವಾರದ ಟ್ಯಾಗೋರ್ ಕಡಲ ತೀರದಲ್ಲಿ ಮ್ಯೂಸಿಯಂ ಆಗಿ ಸ್ಥಾಪಿಸಲಾಗಿದೆ. ಸುಮಾರು 245 ಟನ್ ತೂಕ, 38.6 ಮೀಟರ್ ಉದ್ದ ಹಾಗು 7.6 ಮೀ. ಅಗಲ ಇರುವ ನೌಕೆ, ಗರಿಷ್ಠ ಗಂಟೆಗೆ 37 ನಾಟಿಕಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ನೌಕೆಯಲ್ಲಿ ಎರಡು 30 ಎಂಎಂ ಗನ್‌ಗಳು, ಒಂದು ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ಉಡಾವಣೆ, 4 ಹಡಗು ವಿರೋಧಿ ಕ್ಷಿಪಣಿ ಲಾಂಚರ್‌ಗಳಿವೆ. ಪ್ರತಿ ದಿನ ನೂರಾರು ಪ್ರವಾಸಿಗರು ಇದರ ವೀಕ್ಷಣೆಗೆಂದೇ ಕಾರವಾರಕ್ಕೆ ಭೇಟಿ ನೀಡುತ್ತಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಎನ್ನುತ್ತಾರೆ ಮ್ಯೂಸಿಯಂ ಮೇಲ್ವಿಚಾರಕ ವಿಜಯ್.

ಕಾರವಾರದಲ್ಲಿ ಈ ಯುದ್ಧ ನೌಕೆ ಸಾಕಷ್ಟು ಪ್ರಸಿದ್ಧಿಯ ಪ್ರವಾಸಿ ಕೇಂದ್ರವೂ ಹೌದು. ದುರದೃಷ್ಟವಶಾತ್ ನಿವೃತ್ತಿ ಬಳಿಕವೂ ಸ್ಥಳೀಯ ಆಡಳಿತಕ್ಕೆ ಲಕ್ಷಾಂತರ ರೂ.ಆದಾಯ ತರುತ್ತಿದ್ದರೂ ಸೂಕ್ತ ನಿರ್ವಹಣೆ ಇಲ್ಲದ ಕಾರಣ ನೌಕೆ ತುಕ್ಕು ಹಿಡಿಯುತ್ತಿದೆ.

ನೌಕೆಯ ಒಳಭಾಗದಲ್ಲಿರುವ ಬ್ಯಾರಕ್‌ಗಳು, ಎಂಜಿನ್ ಕೊಠಡಿಗಳು, ಬಾಹ್ಯ ಬಂದೂಕುಗಳು ಸಮುದ್ರದ ಸನಿಹವೇ ಇರುವ ಕಾರಣ ತುಕ್ಕು ಹಿಡಿಯುತ್ತಿವೆ. ವಿಚಿತ್ರ ಅಂದ್ರೆ, ಮಳೆಗಾಲದಲ್ಲಿ ನೌಕೆಗೆ ತಾಡಪಲ್ ಹೋದಿಕೆ ಹೊರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ‌. ಆವರಣದಲ್ಲಿ ಕುರುಚಲು ಗಿಡಗಳು ಬೆಳೆದು ಸೌಂದರ್ಯ ಕುಂದುತ್ತಿದೆ. ಇರುವ ಇಬ್ಬರು ಕ್ಯೂರೇಟರ್‌ಗಳಿಗೆ ವೇತನ ಪಾವತಿಸದೇ ವರ್ಷಗಳೇ ಸಂದಿವೆ.

ಪ್ರವಾಸಿಗರ ನೆಚ್ಚಿನ ಚಾಪೆಲ್ ಯುದ್ದ ನೌಕೆಯನ್ನು ಇನ್ನಾದರೂ ಸೂಕ್ತ ನಿರ್ವಹಣೆ ಮಾಡುವ ಮೂಲಕ ಉಳಿಸಿಕೊಳ್ಳುವ ಕೆಲಸವನ್ನು ಸ್ಥಳೀಯ ಆಡಳಿತ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details