ಕರ್ನಾಟಕ

karnataka

ETV Bharat / state

ಭರವಸೆಯಾಗಿಯೇ ಉಳಿದ ಇಂದಿರಾ ಕ್ಯಾಂಟೀನ್​​ ಯೋಜನೆ - ಕ್ಯಾಂಟೀನ್ ನಿರ್ಮಾಣಕ್ಕೆ ಚಾಲನೆ

ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಚಾಲನೆ ದೊರೆತು ಹಲವಾರು ತಿಂಗಳುಗಳು ಕಳೆದರೂ ಪೂರ್ಣವಾಗದೆ ಜನಪ್ರತಿನಿಧಿಗಳ ಭರವಸೆ ಹುಸಿಯಾಗಿದೆ.

ಭರವಸೆಯಾಗಿಯೇ ಉಳಿದ ಇಂದಿರಾ ಕ್ಯಾಂಟೀನ್ ಯೋಜನೆ

By

Published : Mar 30, 2019, 11:01 PM IST

ಶಿರಸಿ:ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಚಾಲನೆಗೆ ಅನುಮೋದನೆ ದೊರೆತು ಹಲವಾರು ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ಅದರಲ್ಲೂ ಶಿರಸಿ ಜನರಿಗೆ ಇಂದಿರಾ ಕ್ಯಾಂಟೀನ್ ಮರಿಚೀಕೆಯಾಗಿದಂತೆ ಕಾಣುತ್ತಿದ್ದು, ಕಳೆದ ಐದು ತಿಂಗಳಿನಿಂದ ಇನ್ನೂ ಅಡಿಪಾಯ ಹಂತದಲ್ಲಿಯೇ ಇದೆ.

ಬಡವರ ಕಲ್ಯಾಣಕ್ಕಾಗಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಶಿರಸಿಯಲ್ಲಿ ಕಳೆದ ನವೆಂಬರ್​ನಲ್ಲಿಯೇ ಇಲ್ಲಿನ ಮುಖ್ಯ ಅಂಚೆ ಕಚೇರಿಯ ಬಳಿ ಚಾಲನೆ ನೀಡಲಾಗಿತ್ತು. ಆದರೆ ಐದು ತಿಂಗಳು ಕಳೆದರೂ ಕೇವಲ ಅಡಿಪಾಯ ಮಾತ್ರ ಹಾಕಲಾಗಿದೆ. ಇದರಿಂದ ಶಿರಸಿಯಲ್ಲಿ ಶೀಘ್ರ ಇಂದಿರಾ ಕ್ಯಾಂಟೀನ್ ನಿರ್ಮಾಣ ಆಗಲಿದೆ ಎಂಬ ಜನಪ್ರತಿನಿಧಿಗಳ ಭರವಸೆ ಹುಸಿಯಾಗಿದ್ದು, ನಗರಸಭೆ ನಿರ್ಲಕ್ಷ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಭರವಸೆಯಾಗಿಯೇ ಉಳಿದ ಇಂದಿರಾ ಕ್ಯಾಂಟೀನ್ ಯೋಜನೆ

2018ರ ಅಗಸ್ಟ್​​ನಲ್ಲಿಯೇ ಕ್ಯಾಂಟೀನ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಜಾಗದ ಸಮಸ್ಯೆಯಿಂದ ವಿಳಂಬವಾಯಿತು. ಅಂತಿಮವಾಗಿ ಜಾಗವನ್ನು ಗುರುತಿಸಿ ನವೆಂಬರ್​ನಲ್ಲಿ ಕೆಲಸ ಪ್ರಾರಂಭಿಸಿ 60 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ನಗರಸಭೆ ಗಡವು ನೀಡಿತ್ತು. ಆದರೆ ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್ ನಿರ್ಮಾಣದ ಹಣ ಗುತ್ತಿಗೆದಾರರಿಗೆ ಪಾವತಿಯಾಗಬೇಕಿರುವ ಕಾರಣ ಕೆಲಸ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿರುವ ಜಾಗದ ಪಕ್ಕದಲ್ಲಿಯೇ ಪುರುಷರ ಮತ್ತು ಮಹಿಳೆಯರ ಶೌಚಾಲಯವಿದೆ. ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ನಗರಸಭೆ ವಿಫಲವಾದ ಕಾರಣ ಅದು ಗಬ್ಬು ನಾರುತ್ತಿದೆ. ಈ ರೀತಿ ಗಬ್ಬು ನಾರುತ್ತಿದ್ದರೆ ಕ್ಯಾಂಟೀನ್​ನಲ್ಲಿ ಊಟ ಮಾಡುವುದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಆದ್ದರಿಂದ ಶೌಚಾಲಯ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details