ಕಾರವಾರ/ರತ್ನಗಿರಿ: ನವ ಮಂಗಳೂರಿಗೆ ಬಿಟುಮಿನ್ ಸಾಗಿಸುತ್ತಿದ್ದ ಹಡಗೊಂದು ನೀರು ತುಂಬಿ ಮುಳುಗುತ್ತಿದ್ದಾಗ ಅದರಲ್ಲಿದ್ದ 19 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಕ್ಷಿಪ್ರ ಕಾರ್ಯಾಚರಣೆ ಮೂಲಕ ಶುಕ್ರವಾರ ರಕ್ಷಣೆ ಮಾಡಿದ್ದಾರೆ.
ಮಧ್ಯ ಆಫ್ರಿಕಾದ ಗ್ಯಾಬೋನ್ ರಾಷ್ಟ್ರದ ಬಿಟುಮಿನ್ ಸಾಗಿಸುವ ಹಡಗು ಇದಾಗಿದ್ದು, ಯುಎಇಯ ಖೋರ್ ಫಕ್ಕನ್‌ನಿಂದ ನವಮಂಗಳೂರು ಬಂದರಿನತ್ತ ತೆರಳುತ್ತಿತ್ತು. ಮಹಾರಾಷ್ಟ್ರದ ರತ್ನಗಿರಿ ಕರಾವಳಿಯ ಪಶ್ಚಿಮಕ್ಕೆ 41 ಮೈಲಿಗಳಷ್ಟು ದೂರ ತಲುಪುತ್ತಿದ್ದಂತೆ ಇದ್ದಕ್ಕಿದ್ದಂತೆ ಹಡಗಿನಲ್ಲಿ ನೀರು ತುಂಬಲಾರಂಭಿಸಿದ್ದು, ಹಡಗಿನಲ್ಲಿದ್ದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.
ತಕ್ಷಣವೇ ಭಾರತೀಯ ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನೆಯಾಗಿ ಎರಡು ಕೋಸ್ಟ್ ಗಾರ್ಡ್ನ ಐಸಿಜಿಎಸ್ ಸುಜೀತ್ ಮತ್ತು ಐಸಿಜಿಎಸ್ ಅಪೂರ್ವ ರಕ್ಷಣಾ ಚಟುವಟಿಕೆಗೆ ತೆರಳಿದ್ದವು. ಇದೇ ವೇಳೆ ಸುಧಾರಿತ ಲಘು ಹೆಲಿಕಾಪ್ಟರ್ನ್ನು ಕೂಡ ಈ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಕಾರ್ಯಾಚರಣೆಯಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 18 ಸಿಬ್ಬಂದಿ ಭಾರತೀಯರಾದರೆ, ಓರ್ವ ಹಡಗಿನ ಮಾಸ್ಟರ್‌ನನ್ನು ರಕ್ಷಿಸಲಾಗಿದೆ.