ಕಾರವಾರ(ಉತ್ತರಕನ್ನಡ):ಭಾರತ ಜಗತ್ತಿನಲ್ಲಿಯೇ ಶಕ್ತಿಶಾಲಿ ರಾಷ್ಟ್ರವಾಗಿದ್ದು ಅಮೆರಿಕ ನೌಕಾಪಡೆ ಕೂಡ ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಗೆ ಎರಡು ದಿನಗಳ ಭೇಟಿಗಾಗಿ ಗುರುವಾರ ಆಗಮಿಸಿದ ಸಚಿವರು, ನೌಕಾನೆಲೆ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದ ಜೊತೆ ಮಾತನಾಡಿದರು.
ದೇಶಕ್ಕಾಗಿ ತ್ಯಾಗ ಮಾಡುವ ಸೈನಿಕರನ್ನು ಸದಾ ಗೌರವಿಸಬೇಕು. ಹಿಂದೊಮ್ಮೆ ನನಗೆ ಜಲಾಂತರ್ಗಾಮಿಯಲ್ಲಿ ಹೋಗುವ ಅವಕಾಶ ಒದಗಿಬಂದಿತ್ತು. ಅಲ್ಲಿ ಜೀವನ ನಡೆಸುವುದು ಅತ್ಯಂತ ಕಠಿಣವಾಗಿತ್ತು. ನೀರನ್ನು ಮಿತವಾಗಿ ಅಳೆದು ಬಳಸಬೇಕು. ಇಂತಹ ಸ್ಥಿತಿಯಲ್ಲಿ ಸೈನಿಕರು ತಿಂಗಳುಗಟ್ಟಲೆ ಕುಟುಂಬದಿಂದ ದೂರವಿರುತ್ತಾರೆ. ಸುತ್ತಮುತ್ತ ಎಲ್ಲಿ ನೋಡಿದರಲ್ಲಿ ನೀರು. ಮಾತನಾಡಲು ಬೇರಾರೂ ಇಲ್ಲ. ಸಮುದ್ರದ ಅಲೆಗಳ ಶಬ್ದವನ್ನಷ್ಟೇ ಕೇಳಿಸಿಕೊಂಡು ಅವರು ದೇಶ ರಕ್ಷಣೆಯಲ್ಲಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಭಾರತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ನಮ್ಮ ಸೈನ್ಯದ ಕೊಡುಗೆ ಅಪಾರ. ಪ್ರಧಾನಿ ಮೋದಿ ಅವರು ಬಂದ ನಂತರ ಭಾರತವನ್ನು ಇತರೆ ದೇಶಗಳು ನೋಡುವ ರೀತಿ ಬದಲಾಗಿದೆ. ಈ ಹಿಂದೆ ಭಾರತದ ವಿಚಾರಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿರಲ್ಲಿಲ್ಲ. ಈಗ ಗಂಭೀರವಾಗಿ ಕೇಳುತ್ತಾರೆ. ಪ್ರಧಾನಿ ಮೋದಿ ನಾಯಕತ್ವದಿಂದ ಇದು ಸಾಧ್ಯವಾಗಿದೆ ಎಂದು ಸಿಂಗ್ ತಿಳಿಸಿದರು.