ಕಾರವಾರ:ಕೋವಿಡ್ ನಿಯಂತ್ರಿಸುವ ಸಲುವಾಗಿ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧಾಜ್ಞೆಯಿಂದಾಗಿ ಕಡಲತೀರದಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿತ್ತು. ಇದರಿಂದ ಗೋವಾಕ್ಕೆ ತೆರಳಿ ವರ್ಷಾಚರಣೆ ಸಂಭ್ರಮಿಸಿ ಜನರು ಹಿಂದಿರುಗುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಹರಡುವ ಭೀತಿ ಎದುರಾಗಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನರು ಗುಂಪು ಸೇರುವುದರಿಂದ ಕೊರೊನಾ ಸೋಂಕು ವ್ಯಾಪಿಸುವ ಆತಂಕದಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿತ್ತು. ಇದಕ್ಕೆ ಪೂರಕವಾಗಿ ಉತ್ತರಕನ್ನಡ ಜಿಲ್ಲಾಡಳಿತ ಡಿಸೆಂಬರ್ 31ರ ಸಂಜೆ 8 ರಿಂದ ಜನವರಿ 1ರ ಬೆಳಿಗ್ಗೆ 5 ಗಂಟೆಯವರೆಗೆ ಜಿಲ್ಲೆಯ ಎಲ್ಲ ಉದ್ಯಾನಗಳು ಹಾಗೂ ಕಡಲತೀರದಲ್ಲಿ ಯಾವುದೇ ಸಂಭ್ರಮಾಚರಣೆ ನಡೆಸದಂತೆ ನಿಷೇಧಾಜ್ಞೆ ಹೇರಿತ್ತು. ಇದರಿಂದ ಬೇಸರಗೊಂಡಿದ್ದ ಪ್ರವಾಸಿಗರು ಹೊಸ ವರ್ಷಾಚರಣೆಗಾಗಿ ನೆರೆಯ ಗೋವಾಕ್ಕೆ ತೆರಳಿದ್ದರು.
ಗೋವಾದಲ್ಲಿ ಮೋಜು,ಮಸ್ತಿಗೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಇದರಿಂದ ಜನರು ಕೊರೊನಾ ಆತಂಕವಿಲ್ಲದೇ ಸಂಭ್ರಮಾಚರಣೆ ನಡೆಸಿದ್ದಾರೆ. ಆದರೆ, ಇದೀಗ ಅಲ್ಲಿಗೆ ತೆರಳಿದ್ದವರು ತಂಡೋಪ ತಂಡವಾಗಿ ಜಿಲ್ಲೆಗೆ ವಾಪಸ್ ಆಗುತ್ತಿದ್ದಾರೆ. ಗೋವಾದಿಂದ ಬಂದವರಿಗೆ ಯಾವುದೇ ಕೋವಿಡ್ ಪರೀಕ್ಷೆ ಕೂಡ ನಡೆಸುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಹೆಚ್ಚಳವಾಗುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.