ಕರ್ನಾಟಕ

karnataka

ETV Bharat / state

ಕಾರವಾರ: ಆರೇಳು ವರ್ಷ ಕಳೆದರೂ ಮುಗಿಯದ ಹೆದ್ದಾರಿ ಅಗಲೀಕರಣ - ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ 7 ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಸದೇ ಡೈವರ್ಶನ್ ಕೊಟ್ಟಿದ್ದು ವಾಹನ ಸವಾರರಿಗೆ ಎತ್ತ ಸಾಗಬೇಕು ಎನ್ನುವುದು ತಿಳಿಯದೇ ಅಪಘಾತವಾಗಿ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಸವಾರರು ಮೃತಪಟ್ಟಿದ್ದಾರೆ.

incomplete highway road construction causes accidents in karwar
ಆರೇಳು ವರ್ಷ ಕಳೆದರೂ ಮುಗಿಯದ ಹೆದ್ದಾರಿ ಕಾಮಗಾರಿ

By

Published : Sep 13, 2021, 10:30 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಪ್ರಾರಂಭವಾಗಿ ಆರೇಳು ವರ್ಷಗಳೇ ಕಳೆದಿದ್ರೂ ಕಾಮಗಾರಿ ಇನ್ನೂ ಆಮೆಗತಿಯಲ್ಲಿಯೇ ಸಾಗುತ್ತಿದೆ.

ಕಾಮಗಾರಿ ಇನ್ನೂ ಪೂರ್ತಿ ಮುಗಿಯದಿದ್ದರೂ ಟೋಲ್ ಸಂಗ್ರಹ ಮಾತ್ರ ಪ್ರಾರಂಭಿಸಿ ವರ್ಷವೇ ಆಗಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಎಲ್ಲೆಂದರಲ್ಲಿ ಅರೆಬರೆ ಕಾಮಗಾರಿ ಮಾಡಿ ಬಿಟ್ಟಿರುವುದು ಅಪಘಾತ ಹೆಚ್ಚಾಗಲು ಕಾರಣವಾಗಿದೆ.

ಆರೇಳು ವರ್ಷ ಕಳೆದರೂ ಮುಗಿಯದ ಹೆದ್ದಾರಿ ಕಾಮಗಾರಿ

ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ ಕಾರವಾರದ ಮಾಜಾಳಿ ಗಡಿಯವರೆಗೆ ಹಾದು ಹೋಗಿರುವ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಕಾರ್ಯ ಏಳೆಂಟು ವರ್ಷದ ಹಿಂದೆಯೇ ಪ್ರಾರಂಭಿಸಿದ್ದರೂ ಇನ್ನೂ ಕೂಡ ಕಾಮಗಾರಿ ಮಾತ್ರ ಮುಗಿದಿಲ್ಲ.

ಇದರ ನಡುವೆ ಅವೈಜ್ಞಾನಿಕ ಕಾಮಗಾರಿಗೆ ಪದೇ ಪದೆ ಹೆದ್ದಾರಿಯಲ್ಲಿ ಅಪಘಾತವಾಗಿ ಸಾಕಷ್ಟು ಸಾವು ನೋವಿಗೆ ಕಾರಣವಾಗುತ್ತಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಹೆದ್ದಾರಿಯಲ್ಲಿ ಕಾಮಗಾರಿ ಸರಿಯಾಗಿ ಮುಗಿಸಿಲ್ಲ. ಹೀಗಾಗಿ ವೇಗವಾಗಿ ಬರುವಾಗ ಒಂದೇ ಬಾರಿಗೆ ರಸ್ತೆ ಕಿರಿದಾಗಿ ಮಾಡಲಾಗಿದೆ. ಅಲ್ಲಲ್ಲಿ ಕಾಮಗಾರಿ ಮುಗಿಸದೇ ಡೈವರ್ಶನ್ ಕೊಟ್ಟಿದ್ದು ವಾಹನ ಸವಾರರಿಗೆ ಎತ್ತ ಸಾಗಬೇಕು ಎನ್ನುವುದು ತಿಳಿಯದೇ ಅಪಘಾತವಾಗಿ ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಸವಾರರು ಮೃತಪಟ್ಟಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಸಹ ಈ ಬಗ್ಗೆ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರವಾರದಿಂದ ಭಟ್ಕಳದವರೆಗೆ ಅಪಘಾತವಾಗುವ ಹಲವಾರು ಬ್ಲಾಕ್​​ ಸ್ಪಾಟ್​ಗಳನ್ನು ಗುರುತಿಸಲಾಗಿದೆ. ಆದರೂ ಕೂಡ ಆ ಪ್ರದೇಶದಲ್ಲಿ ಅಪಘಾತ ತಪ್ಪಿಸಲು ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಹೆದ್ದಾರಿಯಲ್ಲಿ ವೇಗವಾಗಿ ಲಾರಿಗಳು, ಬಸ್ಸುಗಳು ಸಾಗುವುದರಿಂದ ಬೈಕ್ ಸವಾರರಿಗೆ ಒಮ್ಮೆಲೇ ಡೈವರ್ಶನ್ ಬಂದಾಗ ತಿಳಿಯದೇ ವಾಹನ ಬಡಿದು ಅಪಘಾತವಾಗುತ್ತಿದೆ. ಹಲವರು ಹೆದ್ದಾರಿ ಅಗಲೀಕರಣಕ್ಕಾಗಿ ಮಾಡಿದ ಎಡವಟ್ಟಿನಿಂದಲೇ ಮೃತಪಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಕೇಳಿದರೆ ಅಪಘಾತವಾಗುವುದರ ಕುರಿತು ಅವರು ಒಪ್ಪಿಕೊಂಡಿದ್ದು ಕಾಮಗಾರಿ ಮಾಡುತ್ತಿರುವ ಐಆರ್‌ಬಿ ಕಂಪನಿಗೆ ಸೂಚನೆ ಕೊಡುತ್ತಿದ್ದೇವೆ. ಅಲ್ಲದೇ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಲಾರಿ ಚಾಲಕರಿಗೂ ವಿಶ್ರಾಂತಿ ಪಡೆಯಲು ಹೆದ್ದಾರಿಯಲ್ಲಿ ಸ್ಥಳಾವಕಾಶ ಮಾಡಿಕೊಡಲು ತಿಳಿಸಲಾಗುತ್ತಿದೆ ಎಂದರು.

ಸದ್ಯ ಮಳೆಗಾಲ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿ ಅಪೂರ್ಣವಾದ ಸ್ಥಳದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಸಹ ಗಮನಹರಿಸಿ ಅಪಘಾತ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.

ABOUT THE AUTHOR

...view details