ಬರಗಾಲ ನಿಭಾಯಿಸಲಾಗದ ಅಸಮರ್ಥ ಸರ್ಕಾರ: ಸಂಸದ ರಾಘವೇಂದ್ರ ವಾಗ್ದಾಳಿ ಶಿರಸಿ:ರಾಜ್ಯ ಕಾಂಗ್ರೆಸ್ ಸರ್ಕಾರ ಬರ್ಬಾದ್ ಆಗಿದೆ. ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸಲಾಗದ ಅಸಮರ್ಥ ಸರ್ಕಾರ ಇದಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರ ವಾಗ್ದಾಳಿ ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳ ನಂತರ ಬರಗಾಲದ ಕೆಟ್ಟ ಪರಿಸ್ಥಿತಿ ಬಂದಿದೆ. ಆದರೆ, ಆಡಳಿತ ಪಕ್ಷ ಬರಗಾಲವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅದರಲ್ಲೂ ಇತ್ತೀಚೆಗೆ ಸರ್ಕಾರ ತೆಗೆದುಕೊಂಡ ನಿರ್ಧಾರ ನೋಡಿದಾಗ ಇದೊಂದು ಅಸಮರ್ಥ ಸರ್ಕಾರ ಎಂಬುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರಗಾಲದ ಛಾಯೆ ಇದ್ದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಒಂದೂ ಕೆಡಿಪಿ ಸಭೆ, ಬರಗಾಲ ಪ್ರವಾಸ ಮಾಡಿಲ್ಲ. ಅಧಿಕಾರದ ಮದದಲ್ಲಿ ಗ್ಯಾರಂಟಿ ಕಾರ್ಡ್ ಭಾಷಣ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಫೀಲ್ಡ್ ನಲ್ಲಿ ಏನಾಗಿದೆ ಎಂಬುದು ತಿಳಿದುಕೊಂಡು ಕೆಲಸ ಮಾಡದ ಪರಿಣಾಮ ದೊಡ್ಡ ನಷ್ಟ ರಾಜ್ಯ, ಜಿಲ್ಲೆ ಹಾಗೂ ಶಿರಸಿಗೂ ಆಗಿದೆ ಎಂದರು.
ರೈತರು ಆತ್ಮಹತ್ಯೆ ಮಾಡಿಕೊಂಡ ಮೇಲೆ, ಬೆಳೆಗಳು ಹಾಳಾದ ಮೇಲೆ ಈಗ ವಿದ್ಯುತ್ ನೀಡುತ್ತಿದ್ದಾರೆ. ಮೇ ತಿಂಗಳಲ್ಲಿ 7 ಗಂಟೆ ವಿದ್ಯುತ್ ಪೂರೈಸಬೇಕಿತ್ತು. ಈಗ ನೀಡುತ್ತೇನೆ ಎನ್ನುತ್ತಿದ್ದಾರೆ. ಇದರಿಂದ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಆಗುತ್ತಿದೆ ಎಂದ ಅವರು, ಸರ್ಕಾರ ರೈತ ವಿರೋಧಿ ನೀತಿಯನ್ನು ಸರಿಪಡಿಸಿಕೊಂಡು ಪ್ರಾಮಾಣಿಕವಾಗಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ರೈತರು ಹಾಗೂ ಬಿಜೆಪಿ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬೆಳೆ ಹಾನಿ : ಉತ್ತರ ಕನ್ನಡ ಜಿಲ್ಲೆಯಲ್ಲಿ 42,295 ಹೆಕ್ಟೇರ್ದಲ್ಲಿ ಭತ್ತ ಬಿತ್ತನೆ ಮಾಡಲಾಗಿದ್ದು, ಅದರಲ್ಲಿ 37,698 ಹೆಕ್ಟೇರ್ ಹಾನಿಯಾಗಿದೆ. ಮುಸುಕಿನ ಜೋಳ 8522 ಹೆಕ್ಟೇರ್ದಲ್ಲಿ ಬೆಳೆದಿದ್ದು,7790 ಹೆಕ್ಟೇರ್ ಫಸಲು ಹಾನಿಯಾಗಿದೆ. ಕಬ್ಬು 14486 ಹೆಕ್ಟೇರ್ ಬೆಳೆದಿದ್ದು,12933 ಹೆಕ್ಟೇರ್ದಲ್ಲಿ ಹಾನಿಯಾಗಿದೆ. ಇದೆಲ್ಲರಿಂದ ಒಟ್ಟು 65,303 ಹೆಕ್ಟೇರ್ದ ಬೆಳೆಯಲ್ಲಿ 58,400 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ. ಅಂದಾಜು 325 ಕೋಟಿ ರೈತರಿಗೆ ಹಾನಿಹಾಗಿದೆ. ಇದರಿಂದ ರೈತರಲ್ಲಿ ಕಣ್ಣು ಒರೆಸುವ ತಂತ್ರ ಆಗದೇ, ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕು ಎಂದು ತಿಳಿಸಿದರು.
ಈ ಬಾರಿ ಕೇಂದ್ರದಿಂದ ಮಳೆಯಾಶ್ರಿತಕ್ಕೆ 8500 ರೂ, ನೀರಾವರಿಗೆ 17 ಸಾವಿರ ಹಾಗೂ ಬಹುವಾರ್ಷಿಕ ಬೆಳೆಗೆ 22500 ರೂ ನೀಡಲಾಗಿದೆ. ಆದರೆ ಇಲ್ಲಿನ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ಇಲ್ಲದೇ ಕ್ರಮವಾಗಿ 5100 ,8000 ಹಾಗೂ 5500 ಮಾತ್ರ ಘೋಷಣೆ ಮಾಡಿದ್ದು, ಅಲ್ಪ ಹಣವನ್ನು ನೀಡುತ್ತಿದೆ. ಇದು ಸರ್ಕಾರಕ್ಕೆ ರೈತರ ಮೇಲಿರುವ ಕಾಳಜಿ ತೋರುತ್ತದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ಬರಗಾಲ ನಿಭಾಯಿಸುವುದು ಬಿಟ್ಟು ರಾಜ್ಯ ಸರ್ಕಾರ ಮಂತ್ರಿಗಳಿಗೆ ಮನೆ ನವೀಕರಣ, ಹೊಸ ಕಾರು ಖರೀದಿಯ ಬಗ್ಗೆ ಕೆಲಸ ಮಾಡುತ್ತಿದೆ. ಬಡವರ ಜೇಬಿಂದ ಲೂಟಿ ಮಾಡಿ ಈ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. ರೈತರ ಕುರಿತು ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ:ರಾಘವೇಂದ್ರ, ಸಾರ್ವಜನಿಕರಿಗೆ ಗ್ಯಾರಂಟಿ ಎಂಬ ಬಿಸ್ಕೆಟ್ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಜನರಿಗೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪುಮಾಡಿದ್ದೇವೆ ಎಂದು ಅನಿಸುತ್ತಿದೆ. ಜೊತೆಗೆ ಮದ್ಯದ ಬೆಲೆ ಏರಿಸಿ ಆ ಹಣದಲ್ಲೇ ಗೃಹ ಲಕ್ಷ್ಮೀ ಮೂಲಕ ಮಹಿಳೆಯರಿಗೆ ಎರಡು ಸಾವಿರ ನೀಡುತ್ತಿದ್ದಾರೆ. ಸಮರ್ಥ ಅಧಿಕಾರ ನಡೆಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು,
ರೈತರ-ಬಡವರ ಅಭಿವೃದ್ದಿಗೆ ಪೂರಕ ಯೋಜನೆ ನೀಡದೆ ಸಮಯ ವ್ಯರ್ಥದ ಆಡಳಿತ ನಡೆಸುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಕೇವಲ ಪ್ರಧಾನಿ ಮೋದಿ-ಸಂಸದರನ್ನು ದೂರುವ ಕಾರ್ಯ ಮಾಡುತ್ತಿದ್ದಾರೆ ಸಂಸದ ಬಿ.ವೈ ರಾಘವೇಂದ್ರ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಕುಮಟಾ ಶಾಸಕ ದಿನಕರ ಶೆಟ್ಟಿ ಇತರರು ಇದ್ದರು.
ಇದನ್ನೂಓದಿ:ದೂರು ನೀಡಿದ್ದವರೆಲ್ಲ ಸಚಿವರ ಅಡುಗೆ ಮನೆಯಲ್ಲಿರುವವರು: ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ