ಕಾರವಾರ:ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಸೈಬರ್ ಕ್ರೈಂ ಪ್ರಕರಣಗಳು ಕೂಡ ಹೆಚ್ಚುತ್ತಲೇ ಇವೆ. ಪೊಲೀಸ್ ಇಲಾಖೆ ಅದೆಷ್ಟೇ ಎಚ್ಚರಿಕೆ ನೀಡಿದರು, ಅರಿವು ಮೂಡಿಸಿದರು ಕೂಡ ಜನರು ಒಂದಲ್ಲ ಒಂದು ರೀತಿಯಲ್ಲಿ ಆನ್ಲೈನ್ ವಂಚನೆಗೊಳಗಾಗುತ್ತಿದ್ದಾರೆ. ಅಚ್ಚರಿ ಎಂದರೆ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಕಳೆದೆರಡು ವರ್ಷದಿಂದ ಬರೋಬ್ಬರಿ 1.64 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು, ಸೈಬರ್ ಕ್ರೈಂ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿವೆ. ಪ್ರತಿನಿತ್ಯ ಸೈಬರ್ ವಂಚನೆಗೊಳಗಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಜನ ವಂಚನೆಗೊಳಗಾಗಿ ಹಣ ಕಳೆದುಕೊಂಡ ಮೊತ್ತ ಹೆಚ್ಚಾಗಿದೆ. ಮೊಬೈಲ್ಗೆ ಒಟಿಪಿ ಕಳಿಸಿ ವಿವಿಧ ವಿಚಾರದಲ್ಲಿ ವಿಚಾರಣೆ ಮಾಡಿ ಮತ್ತೆ ಒಟಿಪಿ ಪಡೆದು ಜನರನ್ನು ವಂಚಿಸಲಾಗುತ್ತಿದೆ.
ವಿವಿಧ ರೀತಿಯಲ್ಲಿ ಪಂಗನಾಮ.. ಎಟಿಎಂ ಕಾರ್ಡ್ ಹಾಳಾಗಿದೆ ಎಂದು, ಜಾಬ್ ಕೊಡಿಸುವುದಾಗಿ, ಗಿಫ್ಟ್ ಬಂದಿದೆ ಎಂದು, ಆನ್ಲೈನ್ ಬ್ಯುಸಿನೆಸ್, ಕೆವೈಸಿ ಅಪ್ಡೇಟ್ ಎಂದು ಅಕೌಂಟ್ ಮಾಹಿತಿ ಪಡೆದು ವಂಚಿಸುವುದು ಸೇರಿದಂತೆ ಹೀಗೆ ಒಂದಲ್ಲಾ ಎರಡಲ್ಲ ನಾನಾ ಬಗೆಯ ವಂಚನೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ 2022 ನೇ ಸಾಲಿನಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಜನರು ವಿವಿಧ ವಂಚನೆಯಲ್ಲಿ ಸುಮಾರು 43 ಲಕ್ಷ ಹಣ ಕಳೆದುಕೊಂಡಿದ್ದರು.
ಇನ್ನು, 2023ನೇ ಸಾಲಿನಲ್ಲಿ ಈವರೆಗೆ ಸುಮಾರು 1.21 ಕೋಟಿ ಹಣವನ್ನು ಜನರು ವಿವಿಧ ಪ್ರಕರಣದಲ್ಲಿ ಕಳೆದುಕೊಂಡಿದ್ದಾರೆ. ಈ ಸೈಬರ್ ಪ್ರಕರಣದಲ್ಲಿ ಆತಂಕಕಾರಿ ಸಂಗತಿ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧದಲ್ಲಿ ವಿಕ್ಟಿಮ್ ಸಹಾಯ ಇಲ್ಲದೇ ಅಪರಾಧ ಮಾಡಲು ಸಾಧ್ಯವೇ ಇಲ್ಲ. ಒಟಿಪಿ ಶೇರ್ ಮಾಡದೇ ಲಿಂಕ್ ಕ್ಲಿಕ್ ಮಾಡದೇ ಇದ್ದರೇ ಅಪರಾಧ ನಡೆಯಲು ಸಾಧ್ಯವೇ ಇಲ್ಲ.