ಭಟ್ಕಳ:ತಹಶೀಲ್ದಾರ್ ಆದೇಶದ ಮೇರೆಗೆ ತಾಲೂಕು ಆಹಾರ ನಿರೀಕ್ಷಕರು ಭಟ್ಕಳ ತಾಲೂಕಿನ ಹನುಮಾನ ನಗರದಲ್ಲಿನ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿ ಭಾರಿ ಪ್ರಮಾಣದ 57 ಕ್ವಿಂಟಾಲ್ 60 ಕೆಜಿ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರವು ಬಿಪಿಎಲ್ ಪಡಿತರ ಕಾರ್ಡ್ ಹೊಂದಿದ ಮಧ್ಯಮ ವರ್ಗದ ಜನರಿಗೆ ತಿಂಗಳಿಗೊಮ್ಮೆ ನೀಡುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಇನ್ನೊಂದು ಜಾಲ ಪತ್ತೆಯಾಗಿದೆ. ಅಕ್ರಮವಾಗಿ ಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ ಆರೋಪಿಯು ಹನುಮಾನಗರ ಮೂಲದ ರಾಮಚಂದ್ರ ಮಾಸ್ತಪ್ಪ ನಾಯ್ಕ್ ಎಂದು ತಿಳಿದು ಬಂದಿದೆ.
ಈತ ಎರಡು ತಿಂಗಳಿಂದ ಪಡಿತರ ಅಕ್ಕಿಯನ್ನು ಜನರಿಂದ ಉಚಿತವಾಗಿದ್ದ ಕೆಜಿ ಅಕ್ಕಿಗೆ 10 ರೂಪಾಯಿಯಂತೆ ಪಡೆದು ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದ ಎನ್ನಲಾಗಿದೆ. ಜನರಿಗೆ ಮರುಳು ಮಾಡಿ ಅವರಿಂದ ಅಕ್ಕಿ ಪಡೆದು ಬೇರೆಡೆ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ತಹಶೀಲ್ದಾರರ ಆದೇಶದಂತೆ ಆಹಾರ ನಿರೀಕ್ಷಕ ಅಧಿಕಾರಿ ಪ್ರವೀಣ್ ಕುಮಾರ ಅವರು ದಾಸ್ತಾನು ಮಾಡಿದ್ದ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಒಟ್ಟು 81 ಚೀಲದಂತೆ 57 ಕ್ವಿಂಟಾಲ್ 60 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಇದೇ ಅಕ್ಕಿಯನ್ನು ಬಂದರ ರಸ್ತೆಯಲ್ಲಿನ ಗೋಡಾನ್‌ಗೆ ಸಾಗಿಸಲಾಗಿದೆ.