ಕಾರವಾರ: ಯಾವುದೇ ಪರವಾನಗಿ ಇಲ್ಲದೇ ನೆರೆಯ ರಾಜ್ಯಕ್ಕೆ ಹತ್ತಾರು ಲಾರಿಗಳ ಮೂಲಕ ಕಲ್ಲು ಸಾಗಣೆ ( illegal stone mining) ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆ ಸ್ಥಳೀಯರೇ ಲಾರಿಗಳನ್ನು ತಡೆದು ಕದ್ದು ಮುಚ್ಚಿ ನಡೆಯುತ್ತಿರುವ ಗಣಿ ಮಾಫಿಯಾ (Mine Mafia) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೊನ್ನಾವರದಲ್ಲಿ ನಡೆದಿದೆ.
ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಡಿ ಜಾಗದಿಂದ ಯಾವುದೇ ಪರವಾನಗಿ ಇಲ್ಲದೇ ಕಲ್ಲು ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ತಡೆದು, ಸ್ಥಳೀಯರೇ ವಿಚಾರಿಸಿದ್ದಾರೆ. ಈ ವೇಳೆ, ಚಾಲಕರು ಸೂಕ್ತ ಮಾಹಿತಿ ನೀಡದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದಾಗ, ನೆರೆಯ ಆಂಧ್ರಪ್ರದೇಶಕ್ಕೆ ಪರವಾನಗಿ ಇಲ್ಲದೇ ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ. ಇದನ್ನು ಸಿಮೆಂಟ್ ಹಾಗೂ ಬಾಕ್ಸೈಟ್ ಬಳಸುವ ಉದ್ದೇಶದಿಂದ ಕೊಂಡ್ಯೊಯಲಾಗುತ್ತಿತ್ತು.