ಕಾರವಾರ: ಸರ್ಕಾರಿ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ, ಇಂಗ್ಲೀಷ್ ವ್ಯಾಮೋಹ ಸೇರಿದಂತೆ ಇನ್ನಿತರ ಕಾರಣಗಳಿಂದ ಅದೆಷ್ಟೋ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ, ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದರೂ ಕೂಡ, ಶಾಲೆ ಪಕ್ಕದಲ್ಲಿಯೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಇದೀಗ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ಹೌದು, ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡಿಗೆಹಳ್ಳಿಯ ಶಾಲಾ ಪರಿಸ್ಥಿತಿಯಿದು. ಗ್ರಾಮದ ಸರ್ವೆ ನಂ.25ರಲ್ಲಿ ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ದ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.
ಶಾಲಾ ವೇಳೆ ಜೆಸಿಬಿ, ಲಾರಿ ಹಾಗೂ ಟ್ರ್ಯಾಕರ್ ಶಬ್ಧದಿಂದಾಗಿ ವಿದ್ಯಾರ್ಥಿಗಳು ದಿನ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನು ಅಕ್ರಮ ಗಣಿಗಾರಿಕೆ ಶಾಲಾ ಪಕ್ಕದಲ್ಲೇ ನಡೆಯುತ್ತಿದ್ದು, ಶಾಲಾ ಕಾಂಪೌಂಡ್ ಬಳಿಯೇ ಕಲ್ಲುಗಳನ್ನು ಕೊರೆಯಲಾಗಿದೆ. ಶಾಲಾ ಸುತ್ತ 6 ರಿಂದ 8 ಅಡಿಯಷ್ಟು ಆಳದಲ್ಲಿ ಕಲ್ಲುಗಳನ್ನು ಕೊರೆದಿದ್ದು, ಶಾಲಾ ಕಟ್ಟಡ ಕುಸಿದು ಬೀಳುವ ಸಾಧ್ಯತೆ ಹೆಚ್ಚಿದೆ.
"ಮುಂಡಿಗೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಗುಡ್ನಾಪೂರದ ಚಂದ್ರಪ್ಪ ಚನ್ನಯ್ಯ ಎಂಬುವವರು ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಕಲ್ಲು ಕೊರೆಯಿಂದಾಗಿ ಶಾಲೆಯ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಈ ಹಿಂದೆ ಶಾಲೆಗೆ ಜಮೀನಿನ ಮೂಲ ವಾರಸುದಾರರು ದಾನವಾಗಿ ನೀಡಿದ್ದನ್ನು ಇದೀಗ ಜಮೀನು ಖರೀದಿಸಿರುವ ಚಂದ್ರಯ್ಯ ವಾಪಸು ಕೇಳುತ್ತಿದ್ದಾರೆ" ಎಂದು ಗ್ರಾಮಸ್ಥರು, ಗಣಿಗಾರಿಕೆ ಬಂದ್ ಮಾಡಿಸಿ ಇಲ್ಲವೇ ಶಾಲೆಯನ್ನು ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ, ಎರಡು ವರ್ಷದಿಂದ ಅನುಭವಿಸುತ್ತಿದ್ದ ವಿದ್ಯಾರ್ಥಿಗಳ ಸಂಕಷ್ಟ ವೀಕ್ಷಿಸಲು ಖುದ್ದಾಗಿ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಗ್ರಾಮಸ್ಥರು ಮಾತ್ರ ಇದಕ್ಕೆಲ್ಲಾ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳೇ ಶಾಮೀಲು ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಕೆಲವು ತಿಂಗಳ ಹಿಂದೆ ಕಲ್ಲುಕೊರೆಯ ವಿರುದ್ದ ದೂರು ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕವಾಗಿ ಬಂದ್ ಮಾಡಿಸಿ, ಯಂತ್ರೋಪಕರಣ, ವಾಹನಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಈಗ ಮತ್ತೆ ಅಕ್ರಮವಾಗಿ ಕಲ್ಲುಗಣಿಗಾರಿಕೆ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.