ಅಕ್ರಮ ಮದ್ಯ ಸಾಗಾಟ... ಉ.ಕ ಜಿಲ್ಲೆಯ ಗಡಿಯಲ್ಲಿ ಅಬಕಾರಿ ಇಲಾಖೆ ಹೈ ಅಲರ್ಟ್ ಕಾರವಾರ(ಉತ್ತರ ಕನ್ನಡ):ರಾಜ್ಯದಲ್ಲಿ ಅಕ್ರಮ ಮದ್ಯ ಸಾಗಾಟ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಕ್ರಮ ತಡೆಯಲು ಗಡಿಗಳಲ್ಲಿ ಕ್ರಮ ಕೈಗೊಳ್ಳಲು ಖಡಕ್ ಸೂಚನೆ ನೀಡಿದ್ದರು. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಡಿಯಲ್ಲಿ ಅಕ್ರಮ ಮದ್ಯ ಸಾಗಣೆ ತಡೆಯಲು ತಪಾಸಣೆ ಬಿಗಿಗೊಳಿಸಲಾಗಿದೆ.
ರಾಜ್ಯದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗುತಿದ್ದಂತೆ ಅಗ್ಗದ ಗೋವಾ ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಇದೇ ಕಾರಣಕ್ಕೆ ಗೋವಾ-ಕರ್ನಾಟಕ ಗಡಿ ಭಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋವಾ ಅಕ್ರಮ ಮದ್ಯ ಸಾಗಾಟ ಎಗ್ಗಿಲ್ಲದೇ ಸಾಗಿದೆ. ಹೀಗಾಗಿ ಅಬಕಾರಿ ಇಲಾಖೆ ಇದೀಗ ಗಡಿಯಲ್ಲಿ ಕಾರ್ಯಾಚರಣೆಗಿಳಿದಿದೆ.
ಇದನ್ನೂ ಓದಿ:ಬಾಕಿ ತೆರಿಗೆ ಸಂಗ್ರಹಿಸಿ ನಿಗದಿತ ಗುರಿ ತಲುಪಿ : ಪ್ರಮುಖ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ
ಗೌರಿ-ಗಣೇಶ ಹಬ್ಬದ ಜತೆಗೆ ವೀಕೆಂಡ್ ಇದ್ದರಿಂದ ಗೋವಾದಿಂದ ಕರ್ನಾಟಕ ಹಾಗೂ ಇತರೆ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ವಾಣಿಜ್ಯ ವಾಹನ ಓಡಾಟ ಸಹ ಹೆಚ್ಚಾಗಿದೆ. ಈ ಹಿನ್ನೆಲೆ ಕಾರವಾರ ತಾಲೂಕಿನ ಮಾಜಾಳಿ ಹಾಗೂ ರಾಮನಗರದ ಅನಮೋಡ್ ತಪಾಸಣಾ ಕೇಂದ್ರಗಳಲ್ಲಿ ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಒಳ್ಳೆಯ ಬೆಳವಣಿಗೆ:"ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಬಳಿಕ ಅಬಕಾರಿ ಇಲಾಖೆ ಗಡಿ ಜಿಲ್ಲೆಗಳಲ್ಲಿ ತಪಾಸಣೆ ಬಿಗಿಗೊಳಿಸಿದೆ. ಸಿಬ್ಬಂದಿ ನೇಮಿಸಿ ಬಿಗುವಿನ ತಪಾಸಣೆ ಕೈಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ" ಎಂದು ಸ್ಥಳೀಯರು ರೋಹಿದಾಸ್ ವೈಂಗಣಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
"ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು 1,981 ಕಡೆ ದಾಳಿ ಮಾಡಿದ್ದಾರೆ. 32,371 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ. ಇವುಗಳಲ್ಲಿ 3,992 ಲೀಟರ್ ಗೋವಾ ಮದ್ಯ, 1,569 ಗೋವಾ ಪೆನ್ನಿ, ವೈನ್, ಕಳ್ಳಭಟ್ಟಿ, ಬೆಲ್ಲದ ಕೊಳೆ ಸಹ ಸೇರಿದೆ. ಇನ್ನು ಕರಾವಳಿಯ ಜಲ ಮಾರ್ಗದಲ್ಲೂ ಸಹ ಹದ್ದಿನ ಕಣ್ಣಿಡಲಾಗಿದೆ. ಅಕ್ರಮ ದಂಧೆಕೋರರು ಕರ್ನಾಟಕದತ್ತ ಗೋವಾ ಮದ್ಯ ಸಾಗಾಟ ಮಾಡದಂತೆ ತಡೆಯಲು ಅಬಕಾರಿ ಇಲಾಖೆ ಕಠಿಣ ಕ್ರಮ ಜರುಗಿಸುತ್ತಿದೆ" ಎಂದು ಅಬಕಾರಿ ಇನ್ಸ್ಪೆಕ್ಟರ್ ಸದಾಶಿವ ಪಡ್ತಿ ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಅಬಕಾರಿ ಸುಂಕ ಹೆಚ್ಚಾಗುತಿದ್ದಂತೆ ಗೋವಾ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಬರತೊಡಗಿದೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಅಕ್ರಮ ದಂಧೆಕೋರರರು ಹಬ್ಬದ ನೆಪದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟಕ್ಕೆ ಪ್ರಯತ್ನಿಸುತ್ತಿದ್ದಾರೆ. ಇವರ ಹೆಡೆಮುರಿ ಕಟ್ಟಲು ಸದ್ಯ ಅಬಕಾರಿ ಪೊಲೀಸ್ ಇಲಾಖೆ ಸನ್ನದ್ದವಾಗಿದೆ.
ಪ್ರಮುಖ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ:ಕಳ್ಳಭಟ್ಟಿಗೆ ಕಡಿವಾಣ ಹಾಕುವ ಮೂಲಕ ಅಕ್ರಮ ಮದ್ಯ ನುಸುಳುವಿಕೆ ತಪ್ಪಿಸುವ ಜೊತೆಗೆ ಬಾಕಿ ತೆರಿಗೆ ವಸೂಲಿ ಮಾಡಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು.
ಇದನ್ನೂ ಓದಿ:ಲಾರಿಯಲ್ಲಿ ಪ್ಲೈವುಡ್ ನಡುವೆ ಅಕ್ರಮವಾಗಿ ಮದ್ಯ ಸಾಗಣೆ.. ಬೆಳಗಾವಿಯಲ್ಲಿ 28 ಲಕ್ಷ ಮೌಲ್ಯದ ಮದ್ಯ ಜಪ್ತಿ