ಕಾರವಾರ (ಉತ್ತರ ಕನ್ನಡ) :ರಾಜ್ಯದಲ್ಲಿ ವಿಧಾನಸಭೆ ಚುಣಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಭರದಿಂದ ಸಾಗಿವೆ. ಮತ್ತೊಂದೆಡೆ ಚುಣಾವಣೆ ಘೋಷಣೆಯಾದ ದಿನದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಅಕ್ರಮ ಮದ್ಯ, ಹಣ ಸೇರಿದಂತೆ ಇನ್ನಿತರ ಸೂಕ್ತ ದಾಖಲೆ ಇಲ್ಲದೆ ಯಾವುದೇ ವಸ್ತುಗಳನ್ನು ಸಾಗಿಸುವುದು ಕಂಡುಬಂದರೆ ಅವುಗಳನ್ನು ಜಪ್ತಿ ಮಾಡುತ್ತಿದ್ದಾರೆ.
ಅದೇ ರೀತಿ ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ಗೋವಾದಿಂದ ಮದ್ಯ ಸಾಗಿಸುತ್ತಿದ್ದ ಬೋಟ್ ಸೇರಿ 2.90 ಲಕ್ಷ ಮೌಲ್ಯದ ಮದ್ಯವನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಜಪ್ತಿ ಮಾಡಿರುವ ಘಟನೆ ನಡೆದಿದೆ. ತಾಲೂಕಿನ ಮಾಜಾಳಿಯ ಬಾವಳ್ ಬಳಿ ಗೋವಾದಿಂದ ಬೋಟ್ ಮೂಲಕ ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಗೋವಾ ಮದ್ಯವನ್ನ ಸಾಗಾಟ ಮಾಡಲಾಗುತ್ತಿತ್ತು. ವಿಧಾನಸಭಾ ಚುನಾವಣೆ ಹಿನ್ನೆಲೆ ಅಲರ್ಟ್ ಆಗಿದ್ದ ಕರಾವಳಿ ಕಾವಲು ಪೊಲೀಸ್ ಇನ್ಸ್ಪೆಕ್ಟರ್ ನಿಶ್ಚಲಕುಮಾರ ನೇತೃತ್ವದ ತಂಡ ಈ ವೇಳೆ ದಾಳಿ ನಡೆಸಿದೆ. ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದವರು ಬೋಟು ಬಿಟ್ಟು ಪರಾರಿಯಾಗಿದ್ದಾರೆ.
ಅಬಕಾರಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಈ ವೇಳೆ ಬೋಟ್‌ನಲ್ಲಿ 63,360 ರೂಪಾಯಿ ಮೌಲ್ಯದ 576 ಬಾಟಲ್ ಗೋವಾ ಫೆನ್ನಿ, 8,400 ರೂಪಾಯಿ ಮೌಲ್ಯದ 70 ಬಾಟಲ್ ಕ್ಯಾಶ್ಯು ಫೆನ್ನಿ, 58,080 ರೂಪಾಯಿ ಮೌಲ್ಯದ 528 ಬಾಟಲ್ ಗೋವಾ ವಿಸ್ಕಿ, 21 ಸಾವಿರ ಮೌಲ್ಯದ 35 ಲೀಟರ್‌ನ 6 ಕ್ಯಾನ್ ಉರಾಕ್ ಸೇರಿ 1,50,840 ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ. ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ 75 ಸಾವಿರ ಮೌಲ್ಯದ ಬೋಟು, 65 ಸಾವಿರ ಮೌಲ್ಯದ ಎಂಜಿನ್ ಸೇರಿ ಒಟ್ಟೂ 2,90,840 ರೂಪಾಯಿ ಮೌಲ್ಯದ ಸ್ವತ್ತುಗಳನ್ನ ಕರಾವಳಿ ಕಾವಲುಪಡೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೋಟ್ ಮಾಲೀಕರ ಕುರಿತು ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.
ಮತ್ತೊಂದೆಡೆ ದಾಳಿ, 69,120 ರೂ. ಮೌಲ್ಯದ ಮದ್ಯ ಜಪ್ತಿ : ಅಬಕಾರಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಮದ್ಯ ಜಪ್ತಿ ಮಾಡಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ. ವಿಧಾನಸಭೆ ಚುನಾವಣೆ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿ ಇರುವುದರಿಂದ ಜಿಲ್ಲಾ ತಂಡದ ಸಿಬ್ಬಂದಿ ಹಾಗೂ ವಲಯ ಸಿಬ್ಬಂದಿಗಳು ಮತ್ತು ಪಿಎಸ್‌ಐ ಪ್ರವೀಣ್ ಸೇರಿ ತಾಲೂಕಿನ ಉಪ್ಪೋಣಿ ಗ್ರಾಮದ ಕೇಶವ ನಾಯ್ಕ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಪತ್ತೆಯಾದ 69,120 ರೂ. ಮೌಲ್ಯದ 52 ಲೀಟರ್ ಮದ್ಯ ಹಾಗೂ 48 ಲೀಟರ್ ಬಿಯರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. ಬಳಿಕ ಜಿಲ್ಲಾ ತಂಡದ ನಿರೀಕ್ಷಕರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ :ಕಾರವಾರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 17 ಲಕ್ಷಕ್ಕೂ ಹೆಚ್ಚು ನಗದು ವಶ