ಕಾರವಾರ: ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಕಡಲ ತೀರಗಳಲ್ಲಿ ಅಕ್ರಮವಾಗಿ ಮಂಗಳೂರು ಭಾಗದ ಮೀನುಗಾರರು ಬೆಳಕು ಮೀನುಗಾರಿಕೆ (Light fishing) ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಟ್ಕಳ ಕಡಲ ತೀರದಲ್ಲಿ ಅಕ್ರಮವಾಗಿ ಬೆಳಕು ಮೀನುಗಾರಿಕೆ ಆರೋಪ: ಸ್ಥಳೀಯರ ಆಕ್ರೋಶ - ಬೆಳಕು ಮೀನುಗಾರಿಕೆ
ಸರ್ಕಾರ ನಿಷೇಧಿಸಿದ್ದರೂ ಕೂಡ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ ಕಡಲ ತೀರಗಳಲ್ಲಿ ಅಕ್ರಮವಾಗಿ ಬೆಳಕು ಮೀನುಗಾರಿಕೆ (Light fishing) ನಡೆಯುತ್ತಿದ್ದು, ಈ ಕುರಿತು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಳಕು ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಆದರೂ ಕೂಡ ಉತ್ತರಕನ್ನಡ ಜಿಲ್ಲೆಗೆ ಹೊರ ಜಿಲ್ಲೆಗಳ ಮೀನುಗಾರರು ಅಕ್ರಮವಾಗಿ ಆಗಮಿಸಿ, ಬೆಳಕು ಮೀನುಗಾರಿಕೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಭಟ್ಕಳ ತಾಲೂಕು ವ್ಯಾಪ್ತಿಯ ಕಡಲಿನಲ್ಲಿ ಮಂಗಳೂರು ಭಾಗದ ಮೀನುಗಾರರು ಬೆಳಕು ಬಿಟ್ಟು ಮೀನುಗಾರಿಕೆ ನಡೆಸಿದ್ದು, ಇದನ್ನು ಸ್ಥಳೀಯ ಮೀನುಗಾರರು ವಿಡಿಯೋ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಸ್ಥಳೀಯರು ಹಾಗೂ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವವರ ನಡುವೆ ಕಡಲ ತೀರದಲ್ಲೇ ಕೆಲ ಕಾಲ ವಾಗ್ವಾದ ನಡೆದಿದ್ದು, ಲೈಟ್ ಫಿಶಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.