ಶಿರಸಿ(ಉತ್ತರ ಕನ್ನಡ):ಮುಂಗಾರು ಪೂರ್ವ ಭಾರೀ ಮಳೆಯಿಂದಾಗಿ 500ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿರುವ ಘಟನೆ ಶಿರಸಿಯಲ್ಲಿ ನಡೆದಿದೆ. ಜಿಲ್ಲೆಯ ಶಿರಸಿ ತಾಲೂಕಿನ ಬಿಸ್ಲಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡೇಬೈಲ್ನಲ್ಲಿ ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಗಾಳಿ ಮಳೆಯಿಂದಿಗಾಗಿ ಮರ - ಗಿಡಗಳು ನೆಲಕ್ಕುರುಳಿವೆ.
ಜೊತೆಗೆ ಒಂದೇ ಗ್ರಾಮದ 10ಕ್ಕೂ ಹೆಚ್ಚು ಸಾಲು ಮನೆಗಳಿಗೆ ಹಾನಿಯುಂಟಾಗಿದೆ. ಕೇವಲ ಎರಡು ನಿಮಿಷ ಬೀಸಿದ ಬಿರುಗಾಳಿಗೆ ಹಲವು ಮನೆಗಳ ಹಂಚು ಹಾರಿಹೋಗಿವೆ. ಅಡಿಕೆ ತೋಟ, ಬಾಳೆ ಗಿಡಗಳು, ತೆಂಗಿನ ಮರಗಳು ನೆಲಕ್ಕುರುಳಿದ್ದು, ರೈತರು ಕಂಗಲಾಗಿದ್ದಾರೆ. ಜೊತೆಗೆ ಸಮೀಪದಲ್ಲೇ ಇರುವ ಅರಣ್ಯದ ಅರ್ಧದಷ್ಟು ಮರ - ಗಿಡಗಳು ನಾಶವಾಗಿವೆ. ಹಿಂದೆಂದೂ ಕಾಣದ ರೀತಿಯಲ್ಲಿ ಬಿರುಗಾಳಿಯಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ಮಹಾಲಕ್ಷ್ಮೀ ಗೌಡ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ಹಾಳಾಗಿದೆ. ಈ ಗ್ರಾಮೀಣದ ಜನರ ಪರಿಸ್ಥಿತಿ ಈಗ ಅಸ್ತವ್ಯಸ್ತವಾಗಿದೆ.
ಜಿ. ಪಂ ಮಾಜಿ ಸದಸ್ಯ ಬಸವರಾಜ ದೊಡ್ಮನಿ ಮಾತನಾಡಿ, ಬಿಸ್ಲಕೊಪ್ಪ ಗ್ರಾಮ ಪಂಚಾಯಿತಿ ಮೂಡೇಬೈಲ್ನಲ್ಲಿ ಬೀರುಗಾಳಿಯಿಂದ ಭಾರೀ ಅನಾಹುತ ಸಂಭವಿಸಿದೆ. ಸುಮಾರು ಮನೆಗಳ ಮೇಲೆ ಮರಗಳು ಉರುಳಿಬಿದ್ದಿರುವುದರಿಂದ ಮನೆಗಳು ಜಖಂ ಆಗಿದ್ದು, ಮನೆಯಲ್ಲಿ ವಾಸಿಸಲು ಸಾಧ್ಯವಾಗದಂತಾಗಿದೆ. ಇನ್ನು ಅರಣ್ಯದ ಮರ - ಗಿಡಗಳು ಸೇರಿದಂತೆ ಅನೇಕ ತೋಟಗಳಲ್ಲಿ ಅಡಿಕೆ, ತೆಂಗು, ಬಾಳೆ ಗಿಡಗಳು ನೆಲಕ್ಕುರುಳಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ. ಜೊತೆಗೆ ಗ್ರಾಮದಲ್ಲಿ 10ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದರು. ಘಟನಾ ಸ್ಥಳಕ್ಕೆ ಈಗಾಗಲೇ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಗ್ರಾಮಸ್ಥರಿಗೆ ನೆರವು ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.