ಕಾರವಾರ: ಗಂಗಾವಳಿ ನದಿ ನೀರಿನ ಪ್ರವಾಹದಿಂದಾಗಿ ಅಂಕೋಲಾ ತಾಲೂಕಿನ ಸುಂಕಸಾಳ ಬಳಿಯ ಹೋಟೆಲ್ವೊಂದರಲ್ಲಿ 15 ಮಂದಿ ಲಾಕ್ ಆಗಿದ್ದು, ರಕ್ಷಣೆಗಾಗಿ ಮನವಿ ಮಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಜಲಾವೃತಗೊಂಡಿದೆ. ಹೆದ್ದಾರಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ಸುಂಕಸಾಳ ಬಳಿಯ ನವಮಿ ಹೋಟೆಲ್ನ ಮೊದಲ ಮಹಡಿ ಮುಳುಗಡೆಯಾಗಿದೆ. ಇದರಿಂದ ಹೋಟೆಲ್ನಲ್ಲಿ ತಂಗಿದ್ದ 8ಕ್ಕೂ ಹೆಚ್ಚು ಗ್ರಾಹಕರು ಹಾಗೂ ಸಿಬ್ಬಂದಿ ಸೇರಿ 15 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು, ಭಾರಿ ಮಳೆಗೆ ಅರೆಬೈಲ್ ಘಟ್ಟದಲ್ಲಿ ಗುಡ್ಡ ಕುಸಿದ ಪರಿಣಾಮ ಮುಂದೆ ಸಾಗಲಾಗದೇ ನಾಲ್ವರು ಇದೇ ಹೋಟೆಲ್ನಲ್ಲಿ ಆಶ್ರಯ ಪಡೆದಿದ್ದರು. ಇದೀಗ ಹೋಟೆಲ್ಗೆ ನೀರು ನುಗ್ಗಿದ್ದು, ನೆರವಿಗಾಗಿ ಮನವಿ ಮಾಡಿದ್ದಾರೆ.
ಮಹಿಳೆ ಸಾವು!
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿದ್ದಾಗ ದೋಣಿ ಮಗುಚಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ.
ನಿರಂತರ ಮಳೆಯಿಂದಾಗಿ ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು, ಸುಂಕಸಾಳ ಶಿರೂರು ಗ್ರಾಮಗಳು ನಿನ್ನೆ ತಡರಾತ್ರಿಯಿಂದಲೇ ಮುಳುಗಡೆಯಾಗಿವೆ. ಆದರೆ ಈ ವೇಳೆ ಪ್ರವಾಹದಲ್ಲಿ ಸಿಲುಕಿದವರನ್ನು ದೋಣಿಯಲ್ಲಿ ಪ್ರವಾಹ ಸ್ಥಳದಿಂದ ಸ್ಥಳಾಂತರ ಮಾಡುತ್ತಿರುವಾಗ ದೋಣಿ ಪಲ್ಟಿಯಾಗಿ ದುರಂತ ಸಂಭವಿಸಿದೆ. ದೋಣಿ ಮಗುಚಿ ಬಿದ್ದ ಪರಿಣಾಮ ಬೀರು ಗೌಡ (65) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಇನ್ನು ಶಿರೂರು ಗದರಾಮದಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ರೌಡಿಶೀಟರ್ಗಳ ಮನೆಗಳ ಮೇಲೆ CCB ದಾಳಿ.. ಡ್ರ್ಯಾಗರ್ಗಳು ಪತ್ತೆ