ಶಿರಸಿ:ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟ ಹೊಸ್ತೋಟ ಮಂಜುನಾಥ ಭಾಗವತ (80) ಮಂಗಳವಾರ ನಿಧನರಾಗಿದ್ದು, ಯಕ್ಷಲೋಕ ದಿಗ್ಗಜನನ್ನು ಕಳೆದುಕೊಂಡಿದೆ.
ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ (ಸಂಗ್ರಹ ಚಿತ್ರ) ತೀವ್ರ ಅನಾರೋಗ್ಯದಿಂದ ಬಲಳುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 15 ದಿನಗಳಿಂದ ಸಂಪೂರ್ಣ ಹಾಸಿಗೆ ಹಿಡಿದಿದ್ದ ಮಂಜುನಾಥ ಭಾಗವತರನ್ನು ಅಭಿಮಾನಿಗಳು ಆರೈಕೆ ಮಾಡುತ್ತಿದ್ದರು. ಯಕ್ಷಗಾನದ ಆಕರ್ಷಕ ಭಾಗವತಿಕೆ, ನೃತ್ಯ, ಚಂಡೆ, ಮದ್ದಲೆ ವಾದನ, ವೇಷಗಾರಿಕೆ, ಅರ್ಥಗಾರಿಕೆ ಹೀಗೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ಅವರು ಪರಿಣತರಾಗಿದ್ದರು. ಸರಿ ಸುಮಾರು 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಮೇರು ವ್ಯಕ್ತಿತ್ವ ಮಂಜುನಾಥ್ ಭಾಗವತರದ್ದು.
ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ (ಸಂಗ್ರಹ ಚಿತ್ರ) ಮಂಜುನಾಥ ಭಾಗವತರು, ಸುಮಾರು 75 ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿ 1,600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. 1990ರಲ್ಲಿ ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಅಂಧ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ದಾಖಲೆ ಬರೆದರು. ಈ ಶಾಲೆಯ ಮಕ್ಕಳು ‘ಕಂಸವಧೆ’ ಪ್ರಸಂಗವನ್ನು 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶಿಸಿದ್ದರು.
ಸಾಧಕನಿಗೆ ಸಂದ ಪ್ರಶಸ್ತಿಗಳು:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ , ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಅವರಿಗೆ ಒಲಿದಿದೆ.