ಕರ್ನಾಟಕ

karnataka

ETV Bharat / state

ಹೊನ್ನಾವರ ವಾಣಿಜ್ಯ ಬಂದರು ರಸ್ತೆ ಕಾಮಗಾರಿ.. ಒಕ್ಕಲೆಬ್ಬಿಸುವ ಆತಂಕದಿಂದ ಸ್ಥಳೀಯರ ಪ್ರತಿಭಟನೆ! - Honnavara latest news

ಮೀನುಗಾರಿಕೆ ಮೂಲಕವೇ ಬದುಕು ಕಟ್ಟಿಕೊಂಡಿರುವ ಈ ಭಾಗದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಮುಂದಿನ ದಿನಗಳಲ್ಲಿ ಹತ್ತಾರು ಸಮಸ್ಯೆಗಳು ಕಾಡಲಿದೆ. ಅಲ್ಲದೆ ಈಗಾಗಲೇ ಹಲವಾರು ಮನೆಗಳಿಗೆ ಮಾರ್ಕಿಂಗ್ ಮಾಡಿದ್ದು ಮನೆಗಳು ತೆರವು ಮಾಡುವ ಆತಂಕ ಇದೆ. ಅಲ್ಲದೆ ಕಂಪನಿ ಎಲ್ಲಿಯವರೆಗೆ ಬಂದರು ಅಭಿವೃದ್ಧಿ ಪಡಿಸಲಿದೆ ಎಂಬುದರ ಬಗ್ಗೆ ಯಾರಿಗೂ ಕೂಡ ಸರಿಯಾದ ಮಾಹಿತಿ ಇಲ್ಲ..

protest
ಪ್ರತಿಭಟನೆ

By

Published : Feb 1, 2021, 5:01 PM IST

ಕಾರವಾರ : ವಾಣಿಜ್ಯ ಬಂದರಿಗೆ ಏಕಾಏಕಿ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿಯಿಂದ ಆತಂಕಕ್ಕೊಳಗಾದ ಜನರು ಕಂಪನಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿರುವ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡಿನ ಮಲುಕುರ್ವಾದಲ್ಲಿ ನಡೆದಿದೆ.

ಸ್ಥಳೀಯರ ಪ್ರತಿಭಟನೆ

ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಹೆಚ್‌ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಾಣ ಮಾಡತೊಡಗಿದೆ. ಬಂದರಿಗೆ ಪೂರಕವಾಗಿ ಶರಾವತಿ ಅಳವೆ ಪ್ರದೇಶದಲ್ಲಿ ಇದೀಗ ಏಕಾಏಕಿ ಮಣ್ಣು ಸುರಿದು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ರಸ್ತೆಯಂಚಿನ ಮನೆಗಳ ಜನರು ಆತಂಕಕ್ಕೊಳಗಾಗಿದ್ದಾರೆ.

ಇಂದು ಕಂಪನಿ ಪೊಲೀಸ್ ಭದ್ರತೆಯಲ್ಲಿ ರಸ್ತೆಯಂಚಿನ ಮನೆಗಳನ್ನು ತೆರವುಗೊಳಿಸುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಆತಂಕಿತರಾದ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಂಪನಿ ಸರಿಯಾದ ಮಾಹಿತಿ ನೀಡದೇ ಕಾಮಗಾರಿ ನಡೆಸುತ್ತಿದ್ದು, ಮೀನುಗಾರಿಕೆ ಮೂಲಕ ಬದುಕುಕಟ್ಟಿಕೊಂಡಿರುವ ಸಾವಿರಾರು ಮೀನುಗಾರರ ಬದುಕು ಇದೀಗ ಬೀದಿಗೆ ಬೀಳುವ ಆತಂಕ ಎದುರಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಂಪನಿ ಈ ಪ್ರದೇಶದಲ್ಲಿ ಕಾಮಗಾರಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು.

ಇನ್ನು ಕಾಮಗಾರಿ ಪ್ರದೇಶಕ್ಕೆ ಪ್ರತಿಭಟನಾಕಾರರು ನುಗ್ಗಲು ಮುಂದಾದಾಗ ತಡೆದ ಪೊಲೀಸರು ಸ್ಥಳಕ್ಕೆ ಕಂಪನಿ ಅಧಿಕಾರಿಗಳು ಹಾಗೂ ತಹಶೀಲ್ದಾರ್ ವಿವೇಕ್ ಶೆಣ್ವಿ ಅವರನ್ನು ಕರೆಸಿದ್ದರು. ಕೊನೆಗೆ ಸಮಸ್ಯೆಯನ್ನು ಹೇಳಿಕೊಂಡ ಸ್ಥಳೀಯರು ಈ ಭಾಗದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು ನಮಗೆ ಯಾವುದೇ ನೋಟಿಸ್ ನೀಡದೆ ತೆರವಿಗೆ ಮುಂದಾಗಿದ್ದಾರೆ.

ಮೀನುಗಾರಿಕೆ ಮೂಲಕವೇ ಬದುಕು ಕಟ್ಟಿಕೊಂಡಿರುವ ಈ ಭಾಗದಲ್ಲಿ ರಸ್ತೆ ನಿರ್ಮಾಣವಾದಲ್ಲಿ ಮುಂದಿನ ದಿನಗಳಲ್ಲಿ ಹತ್ತಾರು ಸಮಸ್ಯೆಗಳು ಕಾಡಲಿದೆ. ಅಲ್ಲದೆ ಈಗಾಗಲೇ ಹಲವಾರು ಮನೆಗಳಿಗೆ ಮಾರ್ಕಿಂಗ್ ಮಾಡಿದ್ದು ಮನೆಗಳು ತೆರವು ಮಾಡುವ ಆತಂಕ ಇದೆ. ಅಲ್ಲದೆ ಕಂಪನಿ ಎಲ್ಲಿಯವರೆಗೆ ಬಂದರು ಅಭಿವೃದ್ಧಿ ಪಡಿಸಲಿದೆ ಎಂಬುದರ ಬಗ್ಗೆ ಯಾರಿಗೂ ಕೂಡ ಸರಿಯಾದ ಮಾಹಿತಿ ಇಲ್ಲ.

ಆದ್ದರಿಂದ ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಿ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಕಂಪನಿಯು ಸರ್ವೆ ಮಾಡಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರಾದ್ರೂ ಸಾಧ್ಯವಾಗಿಲ್ಲ‌.

ಕೊನೆಗೆ ತಹಶೀಲ್ದಾರರು ಅರ್ಧಕ್ಕೆ ತೆರಳಿದ್ದು ಸ್ಥಳೀಯರು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಸದ್ಯ ಪೊಲೀಸ್ ಭದ್ರತೆಯಲ್ಲಿ ರಸ್ತೆ ಕಾಮಗಾರಿ ಮುಂದುವರಿದಿದೆ. ಸ್ಥಳದಲ್ಲಿ ನೂರಾರು ಪೊಲೀಸರು ಬೀಡು ಬಿಟ್ಟಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ABOUT THE AUTHOR

...view details