ಕಾರವಾರ: ದೀಪಾವಳಿ ಹಬ್ಬದ ಪ್ರಯಕ್ತ ನಾನಾ ಕಡೆ ಸಾಂಪ್ರದಾಯಿಕ ಕ್ರೀಡೆ ಹಾಗೂ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಕೋಮಾರಪಂಥ ಸಮಾಜದವರು ಪಾರಂಪರಿಕವಾಗಿ ಆಚರಿಸಲಾಗುವ ಹೊಂಡೆ(ಕಹಿ ಹಿಂಡ್ಲೆಕಾಯಿ) ಹಬ್ಬವು ರೋಮಾಂಚನಕಾರಿಯಾಗಿ ಜರುಗಿತು.
ಅಂಕೋಲಾ ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಮಾರಪಂಥ ಸಮಾಜದವರು ದೀಪಾವಳಿಯ ಬಲಿಪಾಡ್ಯಮಿಯಂದು ಹೊಂಡೆ ಆಟವನ್ನ ಆಡಿಕೊಂಡು ಬರುತ್ತಿದ್ದಾರೆ. ಕೋಮಾರಪಂಥ ಸಮಾಜದವರು ಮೂಲತಃ ಕ್ಷತ್ರೀಯ ಸಮಾಜಕ್ಕೆ ಸೇರಿದವರು. ಸೈನಿಕರಾಗಿದ್ದ ಸಮಾಜದವರು ಅಂದು ಯುದ್ಧ ಭೂಮಿಯಲ್ಲಿ ನಾಡಿನ ರಕ್ಷಣೆಗಾಗಿ ತೋರಿದ ಸಾಹಸದ ಪ್ರತಿಯಾಗಿ ಈ ಹೊಂಡೆ ಆಟವನ್ನ ಆಡುವ ಮೂಲಕ ತಮ್ಮ ಸಂಪ್ರದಾಯವನ್ನ ಮುಂದುವರಿಸಿಕೊಂಡು ಬಂದಿದ್ದಾರೆ.
ಅಂಕೋಲಾದಲ್ಲಿ ಹೊಂಡೆಕಾಯಿ ಹೊಡೆದಾಟ ಆಯೋಜನೆ ಎರಡು ತಂಡಗಳಾಗಿ ರಚನೆ:
ಚಾವಟಿಯೊಂದನ್ನ ಸಿದ್ಧಮಾಡಿಕೊಳ್ಳುವ ಸಮಾಜದ ಯುವಕರು, ಎರಡು ತಂಡಗಳನ್ನಾಗಿ ಮಾಡಿಕೊಂಡು ಹೊಂಡೆಕಾಯಿ(ಕಹಿ ಹಿಂಡ್ಲೆಕಾಯಿ) ಯಲ್ಲಿ ಕಾದಾಡುವುದೇ ಈ ಆಟದ ವಿಶೇಷ. ಹೊಂಡೆ ಆಟವನ್ನ ಕೋಮಾರಪಂಥ ಸಮಾಜದವರು ಮಾತ್ರ ಆಡುತ್ತಾರೆ. ಅಂಕೋಲಾ ಮತ್ತು ಕುಮಟಾ ಪಟ್ಟಣದಲ್ಲಿ ಮಾತ್ರ ಈ ವಿಶಿಷ್ಟ ಸಂಪ್ರದಾಯ ಆಚರಣೆಯಲ್ಲಿದೆ. ಅದರಂತೆ ಈ ಬಾರಿ ಸಹ ಹೊಂಡೆ ಆಟವನ್ನ ಸಮಾಜದವರು ಆಡುವ ಮೂಲಕ ಸಂಭ್ರಮಿಸಿದರು.
ಆಟದ ನಿಯಮಗಳು:
ಹೊಂಡೆ ಆಟದಲ್ಲಿ ಒಂದು ತಂಡ ಶಾಂತದುರ್ಗಾ ದೇವಸ್ಥಾನದಿಂದ ಆಟ ಆಡಿಕೊಂಡು ಬಂದ್ರೆ ಮತ್ತೊಂದು ತಂಡ ಕಳಸ ದೇವಸ್ಥಾನದಿಂದ ಆಟ ಆಡುತ್ತಾ ಬಂದಿತು. ಅ ನಂತರ ಮಾರ್ಗಮಧ್ಯೆ ಎರಡೂ ತಂಡಗಳು ಒಂದೆಡೆ ಸೇರಿ ಕಾದಾಟಕ್ಕೆ ಇಳಿದರು. ಚಾವಟಿಯಲ್ಲಿ ಹೊಂಡೆಕಾಯಿ ಹೊಡೆಯುವಾಗ ಕೇವಲ ಮೊಣಕಾಲಿನಿಂದ ಕೆಳಗೆ ಮಾತ್ರ ಹೊಡೆಯಬೇಕು. ಯಾರು ಮೊಣಕಾಲಿನಿಂದ ಮೇಲೆ ಹೊಡೆಯುತ್ತಾರೋ ಅಂತವರನ್ನ ಆಟದಿಂದ ತೆಗೆದು ಹಾಕಲಾಗುತ್ತೆ.
ಸುಮಾರು ನಾಲ್ಕೈದು ಗಂಟೆಗಳ ಕಾಲ ಅಂಕೋಲಾ ಪಟ್ಟಣದಲ್ಲಿ ಚಾವಟಿ ಹಿಡಿದು ಹೊಂಡೆಕಾಯಿಗಳ ಮೂಲಕ ಕಾದಾಟ ನಡೆಸಿದ ಕೋಮಾರಪಂಥ ಸಮಾಜದವರು ಅಂತಿಮವಾಗಿ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಆ ವರ್ಷದ ಹೊಂಡೆ ಆಟಕ್ಕೆ ತೆರೆ ಎಳೆಯುತ್ತಾರೆ. ಕೆಲವೊಮ್ಮೆ ಅನಾಹುತಗಳು ಸಂಭವಿಸಿದ್ರೂ ಕೂಡ, ಈ ಆಟ ನಮ್ಮ ಸಂಪ್ರದಾಯವೆಂದು ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುತ್ತಾರೆ.