ಕಾರವಾರ: ಕದ್ರಾ ಜಲಾಶಯದಿಂದ ಸತತವಾಗಿ ನೀರು ಬಿಡುಗಡೆ ಮಾಡಿದ ಪರಿಣಾಮ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ವೆ ಗ್ರಾಮದಲ್ಲಿ ಹಲವು ಮನೆಗಳ ಗೋಡೆಗಳು ಕುಸಿದಿವೆ.
ಕಾರವಾರದ ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹರಿಬಿಟ್ಟ ಕಾರಣ ಕಾಳಿನದಿ ಉಕ್ಕಿ ಹರಿದು ಮನೆಗಳ ಗೋಡೆಗಳು ಕುಸಿಯುತ್ತಿದ್ದು, ಇಲ್ಲಿನ ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಇಲ್ಲಿನ ಬಹುತೇಕರು ಕೃಷಿಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. 2019ರಲ್ಲಿ ಭಾರಿ ಮಳೆ ಸುರಿದು, ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿತ್ತು. ಆಗಲೂ ಹಲವು ಮನೆಗಳಿಗೆ ನೀರು ನುಗ್ಗಿ, ಗೋಡೆಗಳು ಕುಸಿದು ಬಿದ್ದಿದ್ದವು. ಈ ವರ್ಷವೂ ಕೂಡ ಅದೇ ಪರಿಸ್ಥಿತಿ ಉದ್ಭವವಾಗಿದೆ.