ಕಾರವಾರ: ಸಿದ್ದರಾಮಯ್ಯ ಅವರು ಮೈನಾರಿಟಿ ವೋಟಿಗಾಗಿ ಜೊಲ್ಲು ಸುರಿಸುತ್ತಿರೋದು ಬಿಟ್ರೆ ಬೇರೇನಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಚಾಟಿ ಬೀಸಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಅವರು ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು. ಆರ್‌ಎಸ್ಎಸ್ ಬಗ್ಗೆ ಎಷ್ಟು ಕೆಳಮಟ್ಟದಲ್ಲಿ ಮಾತನಾಡುತ್ತಾರೋ, ಅಷ್ಟು ಅಲ್ಪಸಂಖ್ಯಾತರ ವೋಟು ಬೀಳುತ್ತವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭಾವಿಸಿದ್ದಾರೆ. ಆದರೆ, ಅದ್ಯಾವುದೂ ಸಿಗೋದಿಲ್ಲ. ಇದೆಲ್ಲಾ ಅವರ ಭ್ರಮೆ ಅಷ್ಟೇ. ಆರ್‌ಎಸ್‌ಎಸ್ ಅನ್ನು ದೂರಿದಷ್ಟು ಅವರೇ ಕಳೆದು ಹೋಗುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಸ್ವಯಂ ಯೋಗ್ಯತೆ ಇಲ್ಲದೇ ಇದ್ರೂ ಕಾಂಗ್ರೆಸ್ ಅಧ್ಯಕ್ಷರಾಗಿ ಬಂದವರಿದ್ದಾರೆ. ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ಅವರ ಪುತ್ರನಿಗೆ ಏನೂ ಅರ್ಹತೆ ಇಲ್ಲದಿದ್ದರೂ ಬಂದು ಬಿಡ್ತಾರೆ. ಮಗ ಎನ್ನುವ ಕಾರಣಕ್ಕೆ ಅರ್ಹತೆ, ಯೋಗ್ಯತೆ ಇದ್ದವರು ಮೂಲೆಗುಂಪು ಸಹ ಆಗಬಾರದು. ಸೇವಾ ಮನೋಭಾವ, ರಾಜಕೀಯ ಆಸಕ್ತಿ ಹಾಗೂ ಜ್ಞಾನ ಇರೋರಿಗೆ ಉತ್ತಮ ಸ್ಥಾನ ನೀಡಲಿ ಎಂದರು.