ಭಟ್ಕಳ:ತಾಲೂಕಿನ ಗಡಿ ಭಾಗ ಬೆಳಕೆಯ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಮೀಪದ ಮನೆಯೊಂದಕ್ಕೆ ಖದೀಮರು ಹಾಡಹಗಲೇ ನುಗ್ಗಿ ಕಳ್ಳತನ ಮಾಡಿದ್ದರು. ಈಗ ಆರೋಪಿಗಳು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೆಳಕೆಯ ತಿಮ್ಮಯ್ಯ ಕುಪ್ಪಯ್ಯ ನಾಯ್ಕ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ಸುಮಾರು 6 ಸಾವಿರ ನಗದು, ಮೊಬೈಲ್ ಹಾಗೂ ಗೇರು ಬೀಜ ತುಂಬಿದ ಚೀಲವನ್ನು ಕದ್ದಿರುವ ಕಳ್ಳರು ಪರಾರಿಯಾಗಿದ್ದಾರೆ.
ಕದಿಯುವ ತರಾತುರಿಯಲ್ಲಿ ತಮ್ಮ ಮೊಬೈಲ್‍ನ್ನು ಘಟನೆಯ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದ ಕಳ್ಳರು, ನಂತರ ಬಿಟ್ಟ ಮೊಬೈಲ್‍ನ್ನು ಹಿಂದಿರುಗಿ ತರಲೆಂದು ಅಲ್ಲಿಗೆ ಬಂದಿದ್ದಾರೆ. ಅನುಮಾನಗೊಂಡ ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.
ಬಂಧಿತರನ್ನು ಯೂನಸ್ ಮತ್ತು ಮೂದಾಸೀರ್ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಐವರು ಕಳ್ಳತನದಲ್ಲಿ ಇರಬಹುದೆಂದು ಶಂಕಿಸಲಾಗಿದೆ. ಇನ್ನೂ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 6 ತಿಂಗಳ ಹಿಂದೆಯೂ ಇದೇ ಮನೆಯಲ್ಲಿ ಕಳ್ಳತನ ನಡೆದಿದ್ದು, ಘಟನೆ ಮತ್ತೆ ಪುನರಾವರ್ತನೆಯಾಗಿದೆ. ಗ್ರಾಮಸ್ಥರಲ್ಲಿ ಇದರಿಂದ ಆತಂಕ ಹೆಚ್ಚಿದ್ದು, ಕಳ್ಳರನ್ನು ಹಿಡಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.