ಕಾರವಾರ:ದೇಶದೆಲ್ಲೆಡೆ 75 ಸ್ವಾಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಅದರಂತೆ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಆಳಿದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯಲ್ಲಿಯೂ ಈ ಭಾರಿ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೋಟೆಯನ್ನು ಕೇಸರಿ, ಬಿಳಿ, ಹಸಿರು ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಳಿಸಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.
ಕೋಟೆಗೆ ಮತ್ತಷ್ಟು ಮೆರುಗು: ಕುಮಟಾ ತಾಲೂಕಿನಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಮಿರ್ಜಾನ್ ಕೋಟೆ, ಈಗಾಗಲೇ ಮಳೆಯಿಂದಾಗಿ ಹಸಿರು ಹುಲ್ಲುಗಳು ಬೆಳೆದು ಹಸಿರ ಹಾಸಿಗೆಯಂತೆ ಕಣ್ಸೆಳೆಯುತ್ತಿತ್ತು. ಇದೀಗ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನ ಅಳವಡಿಸಿರುವುದು ಕೋಟೆಗೆ ಮತ್ತಷ್ಟು ಮೆರುಗು ನೀಡಿದೆ. ಪುರಾತತ್ವ ಇಲಾಖೆಗೆ ಒಳಪಡುವ ಈ ಕೋಟೆಯನ್ನು ಅಮೃತ ಮಹೋತ್ಸವದ ನಿಮಿತ್ತ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯು ಕೇಸರಿ, ಬಿಳಿ, ಹಸಿರು ತ್ರಿವರ್ಣದ ಕಾಂಬಿನೇಶನ್ನಲ್ಲಿ ಹ್ಯಾಲೋಜಿನ್ ಲೈಟ್ಗಳನ್ನ ಬಳಸಿ ಶೃಂಗರಿಸಿದೆ. ಸಂಜೆ 6 ರಿಂದ ರಾತ್ರಿ 11 ರವರೆಗೂ ಲೈಟ್ ಗಳು ಉರಿಯಲಿದ್ದು, ಆಗಸ್ಟ್ 15ರ ತನಕವೂ ಕೋಟೆ ಹೀಗೆಯೇ ಕಂಗೊಳಿಸಲಿದೆ.
ಪ್ರತಿ ಮಳೆಗಾಲದ ವೇಳೆ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದ ಕೋಟೆ, ಇದೀಗ ವಿದ್ಯುತ್ ಅಲಂಕಾರದಿಂದಾಗಿ ಮತ್ತಷ್ಟು ಮೆರುಗು ಹೆಚ್ಚಿಸಿಕೊಂಡಿದೆ. ಕೋಟೆಯ ಮುಂಭಾಗದುದ್ದಕ್ಕೂ ಅಳವಡಿಸಿರುವ ಕೇಸರಿ ಬಿಳಿ ಹಸಿರು ಬಣ್ಣದ ಲೈಟ್ಗಳು ಕೋಟೆ ನೋಡುವವರನ್ನು ರೋಮಾಂಚನಗೊಳಿಸುತ್ತದೆ. ಇದೇ ಕಾರಣದಿಂದ ನಿತ್ಯ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.