ಕಾರವಾರ :ಶಿಕ್ಷಣ ಕಲಿಯಲು ಶಾಲಾ ಕಾಲೇಜಿಗೆ ಬರುವ ಮಕ್ಕಳಲ್ಲಿ ಹಿಜಾಬ್ ಎನ್ನುವಂತ ವಿವಾದ ಎಬ್ಬಿಸಿ ಧರ್ಮಾಂಧತೆ ಸೃಷ್ಟಿ ಮಾಡುವ ತಂತ್ರಗಳು ನಡೆದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆರೋಪಿಸಿದರು.
ಹಿಜಾಬ್-ಕೇಸರಿ ಶಾಲು ವಿವಾದದ ಬಗ್ಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿರುವುದು.. ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ತಂತ್ರಗಳು ನಡೆದಿವೆ. ಇದರ ಹಿಂದೆ ಯಾರೇ ಇದ್ದರೂ, ಯಾವುದೇ ಸಂಘಟನೆಯಿದ್ದರೂ ನಿರ್ಧಾಕ್ಷಿಣ್ಯವಾಗಿ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದರು.
ಸಂವಿಧಾನದ ಮೇಲೆ ಗೌರವ ಇದ್ದವರು ಕೋರ್ಟ್ ಆದೇಶ ಪಾಲಿಸಬೇಕು. ಸರ್ಕಾರ ಈ ಆದೇಶವನ್ನು ಅತ್ಯಂತ ಗೌರವ ಪೂರ್ಣವಾಗಿ ಸ್ವೀಕರಿಸಿದೆ. ಮುಂದಿನ ನ್ಯಾಯಾಲಯದ ತೀರ್ಪನ್ನು ಕಾಯಬೇಕಿದೆ. ಈಗ ಕೋರ್ಟ್ ಕೊಟ್ಟಿರುವ ಆದೇಶವನ್ನ ಗೌರವಯುತವಾಗಿ ಎಲ್ಲರೂ ಪಾಲಿಸಬೇಕು. ಒಂದು ವೇಳೆ ಪಾಲನೆ ಮಾಡಲಿಲ್ಲ ಅಂದ್ರೆ ಅವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲವೆಂದೇ ಅರ್ಥ ಎಂದರು.
ಈ ದೇಶದಲ್ಲಿ ಯಾವ ಸಂಘಟನೆಗಳು ಮುಖ್ಯ ಅಲ್ಲ. ಸಂವಿಧಾನ, ನ್ಯಾಯಾಲಯ, ಕಾರ್ಯಾಂಗ, ಶಾಸಕಾಂಗ ಮುಖ್ಯ. ನ್ಯಾಯಾಲಯದ ಆದೇಶವನ್ನ ಪಾಲಿಸುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ನಡೆಯುವ ಘಟನೆಗಳ ಬಗ್ಗೆ ಸರ್ಕಾರದ ಬಳಿ ಎಲ್ಲ ಮಾಹಿತಿ ಇರುತ್ತದೆ. ಹೀಗಾಗಿ, ಸೂಕ್ತ ಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಹಿಜಾಬ್ ಗಲಾಟೆ: ಕಾಂಗ್ರೆಸ್ಸಿಗರ ಬಣ್ಣ ಬಯಲಾಗಿದೆ ಎಂದ ಸಚಿವ ಬಿ.ಸಿ.ನಾಗೇಶ್