ಕಾರವಾರ ಬಿಣಗಾ ಸುರಂಗ ಮಾರ್ಗ ಸಂಚಾರದ ಹೆದ್ದಾರಿ ಬಂದ್ ಮಾಡಿರುವುದು ಕಾರವಾರ: ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರದಿಂದ ಬಿಣಗಾ ಕಡೆಗೆ ನಿರ್ಮಿಸಿದ ಸುರಂಗ ಮಾರ್ಗದ ಸಂಚಾರವನ್ನು ಜಿಲ್ಲಾಡಳಿತ ಬಂದ್ ಮಾಡಿ ಆದೇಶ ಹೊರಡಿಸಿದೆ.
ಹೆದ್ದಾರಿ ಪ್ರಾಧಿಕಾರವು ಕಾರವಾರದಿಂದ ಬಿಣಗಾವರೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಿದ್ದ ನಾಲ್ಕು ಸುರಂಗ ಮಾರ್ಗಗಳನ್ನು ಕಳೆದ ಕೆಲ ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಿತ್ತು. ಆದರೆ ಸಂಚಾರ ಮುಕ್ತಗೊಳಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುತ್ತಿಗೆ ಪಡೆದಿದ್ದ ಕಂಪನಿಯಿಂದ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯದೇ ಲೋಪ ಎಸಗಿತು. ಆ ಹಿನ್ನೆಲೆ ಸಾರ್ವಜನಿಕ ಸುರಕ್ಷತಾ ಹಿತದೃಷ್ಟಿಯಿಂದ ಹಾಗೂ ಯಾವುದೇ ಅವಘಡ ಸಂಭವಿಸದಂತೆ ಪೂರ್ವ ಮುಂಜಾಗ್ರತೆ ಕ್ರಮವಾಗಿ ಸುರಂಗ ಮಾರ್ಗದಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರ ತಕ್ಷಣದಿಂದ ನಿರ್ಬಂಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಆದೇಶದ ಬೆನ್ನಲ್ಲೇ ಪೊಲೀಸರು ಸುರಂಗ ಮಾರ್ಗದ ಬಳಿ ಹೆದ್ದಾರಿಗೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ. ಅಲ್ಲದೇ ಸ್ಥಳದಲ್ಲಿ ಟ್ರಾಫಿಕ್ ಪೊಲೀಸರು ನಿಂತು ಅವಘಡ ಸಂಭವಿಸದಂತೆ ಎಚ್ಚರ ವಹಿಸಿದ್ದಾರೆ. ಅಂಕೋಲಾದಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಅಂಕೋಲಾಕ್ಕೆ ಸಂಚರಿಸಲು ಈ ಹಿಂದಿನಂತೆ ಬಿಣಗಾ ಬೈತಕೋಲ್ ಅಲಿಗದ್ದಾದ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಸಭೆ: ಇನ್ನು, ನೆರೆ ಹಾವಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಸಭೆ ನಡೆಸಿದ್ದರು. ಹೆದ್ದಾರಿಯಲ್ಲಿ ಕಾರವಾರದ ಸುರಂಗ ಮಾರ್ಗದ ಒಳಗೆ ನೀರು ಬರುತ್ತಿದೆ. ಮಣ್ಣು ಕುಸಿಯುತ್ತಿದೆ. ಇದರಿಂದ ಅದರಲ್ಲಿ ಸಂಚಾರ ಮಾಡಲು ಸುರಕ್ಷತೆ ಇರುವ ಬಗ್ಗೆ ನಿಮ್ಮ ಬಳಿ ಪ್ರಮಾಣಪತ್ರವಿದೆಯೇ ಎಂದು ಪ್ರಶ್ನಿಸಿದರು. ಆದರೆ, ಕಂಪನಿಯ ಅಧಿಕಾರಿಗಳು ಪ್ರಮಾಣಪತ್ರ ಇರುವ ಬಗ್ಗೆ ಸ್ಪಷ್ಟ ಉತ್ತರ ನೀಡಲಿಲ್ಲ. ಕಾಲಾವಕಾಶ ಪಡೆದು, ವಾಪಸ್ ಬಂದ ಅಧಿಕಾರಿಗಳು, ಇನ್ನೊಮ್ಮೆ ಸಮೀಕ್ಷೆ ಮಾಡಿ ಪ್ರಮಾಣಪತ್ರ ನೀಡುತ್ತೇವೆ ಎಂದಿದ್ದರು.
ಆದರೆ ಇದರಿಂದ ಸಿಟ್ಟಿಗೆದ್ದ ಸಚಿವರು ಪ್ರಮಾಣಪತ್ರವೇ ಇಲ್ಲದೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅವಘಡ ಸಂಭವಿಸಿದರೆ ಯಾರು ಜವಾಬ್ದಾರರು..? ಸುರಂಗದಲ್ಲಿ ವಾಹನ ಸಂಚಾರವನ್ನು ತಕ್ಷಣ ಬಂದ್ ಮಾಡುವಂತೆ ಸೂಚಿಸಿದ್ದರು. ಅದರಂತೆ ಸುರಂಗದ ಸೋರಿಕೆ ಬಂದ್ ಮಾಡಿ ಸುರಕ್ಷತೆ ಪ್ರಮಾಣಪತ್ರ ನೀಡುತ್ತೇವೆ. ಅಲ್ಲಿಯವರೆಗೆ ಸಂಚಾರ ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು.
ಇನ್ನು ಕಳೆದ 9 ವರ್ಷಗಳಿಂದ ಕಂಪನಿ ಕಾಮಗಾರಿ ನಡೆಸಿದ್ದು, 146 ಕಿ. ಮೀ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ 2017 ರಲ್ಲೇ ಮುಗಿಯಬೇಕಿತ್ತು. ಆದರೆ, ಇದುವರೆಗೂ ಮುಗಿದಿಲ್ಲ. ಸಂಪೂರ್ಣ ಕಾಮಗಾರಿ ಆಗದೆಯೇ 2020 ರಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಅಸಮರ್ಪಕ ರಸ್ತೆಯಿಂದ ಸಾವಿರಾರು ಜೀವಗಳು ಬಲಿಯಾಗಿವೆ. ಪ್ರಯಾಣಿಕರಿಗೆ, ಇನ್ಶುರೆನ್ಸ್ ಕಂಪನಿಗಳಿಗೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದರು.
ಹೆದ್ದಾರಿ ಪಕ್ಕದಲ್ಲಿ ಜಮೀನು, ಮನೆಗಳಿಗೆ ನೀರು ತುಂಬುತ್ತಿದೆ. ಇದ್ಯಾವುದರ ಬಗ್ಗೆಯೂ ಕಂಪನಿ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಕಂಪನಿ ಹಾಗೂ ಕೇಂದ್ರ ಸರ್ಕಾರದ ಜತೆ ಆದ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಇದೇ ವಾರದಲ್ಲಿ ಇನ್ನೊಂದು ಸಭೆ ನಡೆಯಲಿದ್ದು, ಎಲ್ಲ ದಾಖಲೆಗಳನ್ನು ಕಂಪನಿ ಒದಗಿಸಬೇಕು. ಅಲ್ಲಿಯವರೆಗೆ ಟೋಲ್ ಸಂಗ್ರಹ ಬೇಡ ಎಂದು ಸೂಚಿಸಿದ್ದರು.