ಕಾರವಾರ : ಅದು ರಾಜ್ಯದ ಕರಾವಳಿಯನ್ನ ಉತ್ತರ ಕರ್ನಾಟಕಕ್ಕೆ ಸಂಪರ್ಕಿಸುವ ಮಹತ್ತರವಾದ ಯೋಜನೆ. ಈ ಯೋಜನೆ ಪೂರ್ಣಗೊಂಡಿದ್ದರೆ ಕೇವಲ ಒಂದು ಜಿಲ್ಲೆ ಮಾತ್ರವಲ್ಲದೇ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ಆದ್ರೆ ಈ ಯೋಜನೆಗೆ ಅಡಿಗಲ್ಲು ಹಾಕಿ ಎರಡು ದಶಕಗಳೇ ಕಳೆದರೂ ಕೆಲ ಪರಿಸರವಾದಿಗಳ ವಿರೋಧದಿಂದಾಗಿ ವಿಳಂಬವಾಗುತ್ತಾ ಬಂದಿತ್ತು. ಇದೀಗ ಹೈಕೋರ್ಟ್ ಯೋಜನೆ ಜಾರಿಯ ಕುರಿತು ಪರಿಶೀಲನೆಗೆ ವನ್ಯಜೀವಿ ಮಂಡಳಿಗೆ ಆದೇಶಿಸಿದ್ದು ಯೋಜನೆ ಪರ ಹೋರಾಟಗಾರರಿಗೆ ಸಂತಸ ಮೂಡಿಸಿದೆ.
ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ದಶಕಗಳ ಕನಸಾಗಿದ್ದು, ಈ ಯೋಜನೆ ಜಾರಿಗೊಳಿಸುವಂತೆ ಸಾಕಷ್ಟು ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ 1999ರಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಿದ್ದು ಅದಾದ ಬಳಿಕ ಪರಿಸರವಾದಿಗಳ ಅಡ್ಡಗಾಲಿನಿಂದಾಗಿ ಯೋಜನೆ ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿದೆ. ಆದ್ರೆ ಖುಷಿಯ ವಿಚಾರ ಎನ್ನುವಂತೆ ಸದ್ಯ ನಡೆದ ವಿಚಾರಣೆಯಲ್ಲಿ ಯೋಜನೆ ಜಾರಿ ಕುರಿತು ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಅಂಕೋಲಾ-ಹುಬ್ಬಳ್ಳಿ ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲ ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಯೋಜನೆ ಇನ್ನೂ ಜಾರಿಯಾಗಿರಲಿಲ್ಲ. ಕಳೆದ ವರ್ಷ ಅಂದಿನ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆ ಜಾರಿಗೆ ಸಮ್ಮತಿ ನೀಡಿದ್ದು, ಯೋಜನೆ ಜಾರಿಯಾಗಬೇಕು ಎಂದು ಕನಸಿಟ್ಟುಕೊಂಡಿದ್ದ ಜಿಲ್ಲೆಯ ಜನರ ಮುಖದಲ್ಲಿ ಖುಷಿ ಮೂಡಿಸಿತ್ತು. ಆದರೆ ಬೆಂಗಳೂರಿನ ಎನ್.ಜಿ.ಓ ಒಂದು ವನ್ಯಜೀವಿ ಮಂಡಳಿಯ ಅನುಮೋದನೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿತ್ತು.