ಕಾರವಾರ: ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರಕ್ಕೆ ಜಿಲ್ಲೆಯ ಬಹುತೇಕ ಕಡೆ ವಿದ್ಯುತ್ ಕಂಬಗಳು ಬುಡಮೇಲಾಗಿವೆ. ಕಳೆದ ಎರಡು ದಿನಗಳಿಂದ ಕತ್ತಲಲ್ಲಿ ಜೀವನ ಕಳೆಯುತ್ತಿರುವ ಜನರ ಸಮಸ್ಯೆ ನಿವಾರಣೆಗೆ ಹೆಸ್ಕಾಂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಅಬ್ಬರಿಸುತ್ತಿರುವ ತೌಕ್ತೆ ಚಂಡಮಾರುತ ಎಲ್ಲೆಡೆ ಸಮಸ್ಯೆಗಳ ಮೇಲೆ ಸಮಸ್ಯೆ ಸೃಷ್ಟಿಸುತ್ತಿದೆ. ಕಡಲತೀರದಲ್ಲಿ ಅಲೆಗಳ ಅಬ್ಬರದಿಂದ ಅದೆಷ್ಟೋ ಮನೆಗಳು ನೀರು ನುಗ್ಗಿ ಹಾನಿಗೀಡಾಗಿವೆ. ಇನ್ನೊಂದೆಡೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆಗೆ ಮರಗಿಡಗಳು, ವಿದ್ಯುತ್ ಕಂಬಗಳು, ಟ್ರಾನ್ಸಫಾರ್ಮರ್ಗಳು ಧರೆಗುರುಳಿವೆ.
ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಕಳೆದ ಎರಡು ದಿನಗಳ ಹಿಂದೆ ಕೈಕೊಟ್ಟಿದ್ದ ವಿದ್ಯುತ್ ಈವರೆಗೂ ಬಂದಿಲ್ಲ. ಇದರಿಂದ ಮನೆಗಳಲ್ಲಿ ನೀರಿಲ್ಲದೆ ಜನ ಪರದಾಡಬೇಕಾಗಿದೆ. ಮೊಬೈಲ್ಗಳು ಸ್ವಿಚ್ ಆಫ್ ಆಗಿವೆ. ಮನೆಗಳಲ್ಲಿನ ಯುಪಿಎಸ್ ಕೂಡ ಬಂದ್ ಆಗಿದ್ದು ಜನ ಕಂಗಾಲಾಗಿದ್ದಾರೆ. ಇಷ್ಟಾದರೂ ತಾಳ್ಮೆಯಿಂದಲೇ ಜನರು ವಿದ್ಯುತ್ಗಾಗಿ ಎದುರು ನೋಡುತ್ತಿದ್ದಾರೆ.
ಕಾರವಾರ ಜನರಿಗೆ ಬೆಳಕು ಹರಿಸಲು ಶ್ರಮಿಸುತ್ತಿದ್ದಾರೆ ಹೆಸ್ಕಾಂ ಸಿಬ್ಬಂದಿ ಪ್ರಕೃತಿ ವಿಕೋಪದಿಂದಾಗಿ ಇಷ್ಟೊಂದು ದೊಡ್ಡ ಮಟ್ಟದ ಹಾನಿಯಾಗಿದೆ. ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ಪರಿಸ್ಥಿತಿ ಬಿಗಡಾಯಿಸಿದೆ. ಮನೆಗಳಲ್ಲಿ ಅಡುಗೆ ಮಾಡಿಕೊಳ್ಳುವುದಕ್ಕೆ, ನೀರಿಗೆ ತೊಂದರೆಯಾಗಿದೆ. ಅಂಗಡಿಗಳಲ್ಲಿ ಇಟ್ಟಿದ್ದ ಐಸ್ ಕ್ರಿಮ್ ನೀರಾಗುತ್ತಿದೆ. ಈ ನಡುವೆ ಕೊರೊನಾ ಸಮಸ್ಯೆ ಇರುವುದರಿಂದ ಹೊರಗೆ ಓಡಾಡುವ ಪರಿಸ್ಥಿತಿ ಕೂಡ ಇಲ್ಲ. ಆದಷ್ಟು ಬೇಗ ಹೆಸ್ಕಾಂ ಜನರ ಸಮಸ್ಯೆಗೆ ಸ್ಪಂದಿಸಿ ಬೆಳಕು ಹರಿಸುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.
ಜಿಲ್ಲೆಯಲ್ಲಿ ಎರಡು ದಿನ ಗಾಳಿ ಸಹಿತ ಮಳೆಯಾದ ಕಾರಣ ಮರಗಳು ಬಿದ್ದು ಅದೆಷ್ಟೋ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಲೈನ್ಗಳು ತುಂಡಾಗಿ ಜೋತಾಡುತ್ತಿವೆ. ಶಿರವಾಡದಿಂದ ನಗರಗಳಿಗೆ ವಿದ್ಯುತ್ ಸರಬರಾಜು ಮಾಡುವ 11 ಕೆವಿ ಲೈನ್ ಮೇಲೆ ಮರ ಬಿದ್ದು ಕಟ್ಟಾಗಿದ್ದು, ಎರಡು ದಿನದಿಂದ ವಿದ್ಯುತ್ ಪೂರೈಕೆ ನಿಂತಿದೆ.
ಆದರೆ, ಗುಡ್ಡದ ತುದಿಯಲ್ಲಿನ ಕಂಬಗಳು ಮುರಿದಿದ್ದರಿಂದ ಕಂಬಗಳ ಸಾಗಾಟ, ಲೈನ್ ಜೋಡಣೆ ಸವಾಲಾಗಿದೆ. ಆದರೂ ಛಲ ಬಿಡದ ಹೆಸ್ಕಾಂ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದಲ್ಲದೆ ಎಲ್ಲೆಡೆಯೂ ಕಂಬಗಳನ್ನು ಹಾಕಿ ಲೈನ್ ಜೋಡಣೆಯಲ್ಲಿ ಮಳೆ ಗಾಳಿ ಎನ್ನದೆ ಶ್ರಮಿಸುತ್ತಿದ್ದಾರೆ. ಇಂದು ಸಂಜೆ ವೇಳೆಗೆ ಕಾರವಾರಕ್ಕೆ ವಿದ್ಯುತ್ ಪೂರೈಕೆಯಾಗುವ ಸಾಧ್ಯತೆ ಇದೆ.