ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಶಾಸಕತ್ವದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಅಭಿಮಾನಿಗಳು ಸಭೆ ಸೇರಿ ಬಿಜೆಪಿಯಿಂದ ತಮ್ಮ ನಾಯಕರು ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿಕೊಂಡರು.
ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅನರ್ಹ ಶಾಸಕರಲ್ಲಿ ಒಬ್ಬರಾಗಿರುವ ಶಿವರಾಮ್ ಹೆಬ್ಬಾರ್, ಕೋರ್ಟ್ ತೀರ್ಪು ಬರುವ ತನಕ ಕಾಯುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಅಲ್ಲದೇ, ಯಾವುದೇ ಪಕ್ಷದಲ್ಲೂ ಗುರುತಿಸಿಕೊಳ್ಳದೇ ತಟಸ್ಥರಾಗಿದ್ದರು.
ನಾನು ಬಿಜೆಪಿ ಸೇರಿಲ್ಲ, ಕೋರ್ಟ್ ತೀರ್ಪು ಬಂದ ಬಳಿಕ ಎಲ್ಲ 15 ಜನರೂ ಒಟ್ಟಾಗಿ ಸಾಮೂಹಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳುತ್ತಿದ್ದರು. ಆದರೆ ಕ್ಷೇತ್ರದಲ್ಲಿ ಅವರ ನೇತೃತ್ವದಲ್ಲೇ ನಡೆದ ಸಭೆಯಲ್ಲಿ ಅಭಿಮಾನಿಗಳು ಬಿಜೆಪಿ ಬೆಂಬಲ ಪಡೆದು ಆ ಪಕ್ಷದಡಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಯಲ್ಲಾಪುರದಲ್ಲಿ ಬೆಂಬಲಿಗರ ಸಭೆ ನಡೆಸಿದ ಶಿವರಾಮ ಹೆಬ್ಬಾರ್ ಬನವಾಸಿ ಹೋಬಳಿಯ ಬದನಗೋಡ, ಬಿಸಲಕೊಪ್ಪ, ಅಂಡಗಿ, ಬಂಕನಾಳ, ಉಂಚಳ್ಳಿ, ಹಲಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಂಬಲಿಗರ ಸಭೆ ನಡೆಸಿದ ಹೆಬ್ಬಾರ್, ಉಪಚುನಾವಣೆಯ ಕುರಿತು ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಹೆಬ್ಬಾರ್ ಕಟ್ಟಾ ಬೆಂಬಲಿಗ ದ್ಯಾಮಣ್ಣ ದೊಡ್ಮನಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಸಾಹೇಬ್ರು ಬಿಜೆಪಿಯಿಂದ ಸ್ಪರ್ಧಿಸಲಿದ್ದು, ಅವರಿಗೆ ನಾವೆಲ್ಲರೂ ಬೆಂಬಲ ನೀಡಿ ಗೆಲ್ಲಿಸೋಣ ಎಂದು ಕರೆ ಕೊಟ್ಟರು. ಆದರೆ ಈ ಬಗ್ಗೆ ಪಕ್ಕದಲ್ಲೇ ಕುಳಿತಿದ್ದ ಹೆಬ್ಬಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಬಳಿಕ ಮಾತನಾಡಿದ ಹೆಬ್ಬಾರ್, ಕಾಂಗ್ರೆಸ್ ನಾಯಕರು ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದರು.
ದಾಸನಕೊಪ್ಪ ಹಾಗೂ ಬನವಾಸಿ ಭಾಗದಲ್ಲಿ ಸಭೆ ನಡೆಸಿ ಚುನಾವಣೆ ತಯಾರಿ ನಡೆಸುವಂತೆಯೂ ಹೆಬ್ಬಾರ್ ತಮ್ಮ ಬೆಂಬಲಿಗರಿಗೆ ಕರೆ ಕೊಟ್ಟಿದ್ದಾರೆ.