ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಮಳೆ ಅಬ್ಬರ... ನದಿ ತೀರದ ಪ್ರದೇಶಗಳು ಮುಳುಗಡೆ, ಜನಜೀವನ ಅಸ್ತವ್ಯಸ್ತ - kannadanews

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನದಿ ತೀರದ ಪ್ರದೇಶಗಳು ಮುಳುಗಡೆಯಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ

By

Published : Aug 5, 2019, 8:47 PM IST

ಕಾರವಾರ/ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲೂ ವರುಣನ ಆರ್ಭಟ. ಜಲಾಶಯಗಳ ಬೋರ್ಗರೆತ.. ಕದ್ರಾ ಜಲಾಶಯದಿಂದ ಇಂದು ಕೂಡ ನೀರನ್ನು ಹೊರಬಿಟ್ಟಿರುವುದರಿಂದ ಕಾಳಿ ನದಿ ಹರಿವಿನಂಚಿನ ಕೆಲ ಪ್ರದೇಶಗಳು ಮುಳುಗಡೆಯಾಗಿ, ಜನಜೀವನ ಅಸ್ತವ್ಯಸ್ತವಾಗಿದೆ.

ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಾರವಾರ, ಯಲ್ಲಾಪುರ, ಜೊಯಿಡಾ ಭಾಗದಲ್ಲಿ ಮಳೆ ಮುಂದುವರಿದ ಪರಿಣಾಮ ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕದ್ರಾ ಜಲಾಶಯ ಭರ್ತಿಯಾಗಿದೆ. ಇದರಿಂದ ಭಾನುವಾರ 5 ಗೇಟ್ ಗಳ ಮೂಲಕ 10.5 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿತ್ತು. ಆದರೂ ನೀರಿನ ಹರಿವು ಹೆಚ್ಚಾದ ಕಾರಣ ಇಂದು ಮತ್ತೆ 10 ಗೇಟ್​​ಗಳ ಮೂಲಕ 43 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ

ಇದರಿಂದಾಗಿ ಕಾಳಿನದಿ ಪ್ರದೇಶವ್ಯಾಪ್ತಿಯ ಕ್ರದಾ, ಮಲ್ಲಾಪುರ ಭಾಗಗಳಲ್ಲಿನ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೆ ಮಲ್ಲಾಪುರ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ಆತಂಕದಲ್ಲಿದ್ದಾರೆ.

ನಿರೀಕ್ಷೆಗೂ ಮೀರಿ ನೀರು ಹರಿದು ಬರುತ್ತಿರುವುದರಿಂದ ಕದ್ರಾ ಗ್ರಾಮದ 7 ಕುಟುಂಬಗಳ ಒಟ್ಟು 23 ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ 2 ದಿನ ಮಳೆ ಮುಂದುವರಿಯುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಾಳೆ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಈಶ್ವರ್ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಶಿರಸಿ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ನೂರಾರು ಎಕರೆ ಅಡಿಕೆ ತೋಟಗಳಿಗೆ ನೀರು ನುಗ್ಗಿ ಕೃಷಿ ಕ್ಷೇತ್ರಕ್ಕೆ ಹಾನಿಯಾಗಿದೆ. ತಣ್ಣೀರ ಹೊಳೆ, ದೇವದಕೆರೆ, ಸಿದ್ದಾಪುರದ ಸರ್ಕುಳಿ ಹೊಳೆ ಸೇರಿದಂತೆ ಹತ್ತಾರು ಸಣ್ಣ ಪುಟ್ಟ ಸೇತುವೆಗಳು ಜಲಾವೃತವಾಗಿವೆ. ಇದಲ್ಲದೇ ಬೇಡ್ತಿ, ಅಘನಾಶಿನಿ, ವರದಾ, ಶಾಲ್ಮಲಾ ನದಿಗಳು ತುಂಬಿ ಹರಿಯುತ್ತಿದ್ದು, ಅಕ್ಕ ಪಕ್ಕದ ಗ್ರಾಮಗಳಿಗೆ ನೆರೆಯ ಭೀತಿ ಎದುರಾಗಿದೆ.

ಸಿದ್ದಾಪುರ ತಾಲೂಕಿನಲ್ಲಿ 125.02 ಮೀ.ಮೀ ಸೇರಿ ಇಲ್ಲಿಯವರೆಗೆ 1904.4 ಮೀ.ಮೀ., ಮುಂಡಗೋಡಿನಲ್ಲಿ 30.8 ಮಿ.ಮೀ. ಹಾಗೂ 643.3 ಮಿ.ಮೀ. ಮತ್ತು ಯಲ್ಲಾಪುರ ತಾಲೂಕಿನಲ್ಲಿ 108.4 ಮಿ.ಮೀ., ಹಾಗೂ ಇಲ್ಲಿಯವರೆಗೆ 1628.4 ಮಿ.ಮೀ. ಮಳೆಯಾಗಿದೆ.

ABOUT THE AUTHOR

...view details