ಕರ್ನಾಟಕ

karnataka

ETV Bharat / state

ಅಣಶಿ ಘಟ್ಟದಲ್ಲಿ ಮತ್ತೆ ಕುಸಿದ ಭೂಮಿ: ಎಚ್ಚರಿಕೆ ಬೆನ್ನಲ್ಲೇ ಶುರುವಾದ ಆತಂಕ

ಕರಾವಳಿಯಿಂದ ಗೋವಾ, ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಹೆದ್ದಾರಿ ಅಗಲೀಕರಣ ಹಿನ್ನೆಲೆ ತೆರವುಗೊಳಿಸಲಾಗಿದ್ದ ಗುಡ್ಡಗಳಿಂದ ಬೃಹತ್ ಗಾತ್ರದ ಕಲ್ಲುಗಳು ರಸ್ತೆ ಮೇಲೆ ಬಿದ್ದಿವೆ.

ಅಣಶಿ ಘಟ್ಟದಲ್ಲಿ ಮತ್ತೆ ಕುಸಿದ ಭೂಮಿ
ಅಣಶಿ ಘಟ್ಟದಲ್ಲಿ ಮತ್ತೆ ಕುಸಿದ ಭೂಮಿ

By

Published : Jul 10, 2022, 9:32 PM IST

ಕಾರವಾರ:ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮ ಕಾರವಾರದಿಂದ ಜೋಯಿಡಾ ಮಾರ್ಗವಾಗಿ ಬೆಳಗಾವಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 34ರ ಅಣಶಿ ಘಟ್ಟದಲ್ಲಿ ಕೆಲ ದಿನಗಳಿಂದ ಅಲ್ಲಲ್ಲಿ ಗುಡ್ಡದ ಮೇಲಿನ ಕಲ್ಲು, ಮಣ್ಣುಗಳು ಕುಸಿದು ರಸ್ತೆಗೆ ಬೀಳುತ್ತಿವೆ.

ಕರಾವಳಿಯ ಗೋವಾ, ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಹೆದ್ದಾರಿ ಅಗಲೀಕರಣ ಹಿನ್ನೆಲೆ ತೆರವುಗೊಳಿಸಲಾಗಿದ್ದ ಗುಡ್ಡಗಳಿಂದ ಬೃಹತ್ ಗಾತ್ರದ ಕಲ್ಲುಗಳು ರಸ್ತೆ ಮೇಲೆ ಬಿದ್ದಿವೆ.

ಭೂಕುಸಿತದ ಬಗ್ಗೆ ಸ್ಥಳೀಯರಾದ ಸುಭಾಷ್​ಚಂದ್ರ ಅವರು ಮಾತನಾಡಿದರು

ಅಲ್ಲದೇ ನಿನ್ನೆಯಷ್ಟೇ ಕಾರವಾರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುರಂಗ ಮಾರ್ಗದ ಬಳಿ ಸಹ ಗುಡ್ಡದ ಮಣ್ಣು ಕುಸಿದಿದ್ದು, ವಾಹನ ಸವಾರರ ನಿದ್ದೆಗೆಡಿಸಿದೆ. ಕಳೆದ ವರ್ಷ 2021ರಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ಜನತೆಗೆ ಅಂತಹುದೇ ಘಟನೆ ಮತ್ತೆ ಮರುಕಳಿಸುವ ಭೀತಿ ಶುರುವಾಗಿದೆ.

ಜಿಲ್ಲೆಯ ಕರಾವಳಿಯಿಂದ ಉತ್ತರ ಕರ್ನಾಟಕ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಘಟ್ಟದಲ್ಲಿನ ರಸ್ತೆಗಳಿಂದಲೇ ಸಂಚರಿಸಬೇಕಾಗಿದೆ. ರಾಜ್ಯ ಹೆದ್ದಾರಿ 34ರ ಅಣಶಿ ಘಟ್ಟ, ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ, ರಾಷ್ಟ್ರೀಯ ಹೆದ್ದಾರಿ 766EEಯ ದೇವಿಮನೆ ಘಟ್ಟ ಹಾಗೂ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಗೇರುಸೊಪ್ಪ ಮಾರ್ಗಗಳು ಪಶ್ಚಿಮ ಘಟ್ಟದಲ್ಲೇ ಹಾದು ಹೋಗಿವೆ.

ಕಳೆದ ಬಾರಿ ಸುರಿದ ಮಳೆಗೆ ಅಣಶಿ ಹಾಗೂ ಅರಬೈಲ್ ಘಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಸಂಪರ್ಕವೇ ಕಡಿತಗೊಂಡಿತ್ತು. ಇದಾದ ಬಳಿಕ ಅಧ್ಯಯನ ನಡೆಸಿದ್ದ ತಜ್ಞರ ತಂಡ ಈ ಬಾರಿಯೂ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವ ಎಚ್ಚರಿಕೆಯನ್ನ ನೀಡಿದ್ದು, ಈ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ.

ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಅಗತ್ಯ ಕ್ರಮ: ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈಗಾಗಲೇ ಭೂಕುಸಿತ ಆತಂಕವಿರುವ ಪ್ರದೇಶಗಳಲ್ಲಿ ತುರ್ತು ಕಾರ್ಯಾಚರಣೆಗೆ ತಂಡಗಳನ್ನ ನೇಮಕ ಮಾಡಿದ್ದು, ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಸನ್ನದ್ಧವಾಗಿರೋದಾಗಿ ತಿಳಿಸಿದ್ದಾರೆ. ಒಟ್ಟಾರೆ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ ಬೆನ್ನಲ್ಲೇ ಹೆದ್ದಾರಿಗಳಲ್ಲಿ ಭೂಕುಸಿತ ಪ್ರಕರಣಗಳು ಸಂಭವಿಸುತ್ತಿದ್ದು, ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧ ಇಲಾಖೆ ಅಧಿಕಾರಿಗಳು ಗಮನಹರಿಸಿ ವಾಹನ ಸವಾರರ ಸುರಕ್ಷತೆಯ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕಿದೆ.

ಓದಿ:ಪಂಜಿಕಲ್ಲಿನಲ್ಲಿ ಮತ್ತೆ ಭೂಕುಸಿತ: ಪ್ರಾಣಾಪಾಯದಿಂದ ನಾಲ್ವರು ಪಾರು

ABOUT THE AUTHOR

...view details