ಕಾರವಾರ: ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಸತತ ಮೂರನೇ ದಿನವೂ ಮಳೆ ಮುಂದುವರೆದಿದ್ದು, ಜಿಲ್ಲಾದ್ಯಂತ ಮಳೆಯ ಅಬ್ಬರಕ್ಕೆ ವಿವಿಧೆಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಉಂಟಾಗಿದೆ. ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವ ದೃಶ್ಯ ಕಂಡುಬಂತು. ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಳೆ ಹೆಚ್ಚಿನ ಮಳೆ ಸುರಿದಿದೆ.
ಗುಳ್ಳಾಪುರದಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ ಮುಳುಗಡೆಯಾಗಿದೆ. ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಗುಳ್ಳಾಪುರ ಸೇತುವೆ ಕುಸಿದು ಬಿದ್ದಿತ್ತು. ಬಳಿಕ ಗಂಗಾವಳಿ ನದಿಯಲ್ಲಿ ನೀರು ಕಡಿಮೆಯಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ, ಧಾರಾಕಾರ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ತಾತ್ಕಾಲಿಕ ರಸ್ತೆ ಮುಳುಗಡೆಯಾಗಿದೆ. ಇದರಿಂದಾಗಿ ಈ ಭಾಗದ ಹತ್ತಾರು ಗ್ರಾಮಗಳು ಸಂಪರ್ಕ ಕಡಿದುಕೊಂಡು ಪರದಾಡುವಂತಾಗಿದೆ.