ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ ಮಳೆ ಅವಾಂತರಕ್ಕೆ ಐವರು ಸಾವು; 600ಕ್ಕೂ ಹೆಚ್ಚು ಮನೆಗಳಿಗೆ ಹಾನಿ - ನೆರೆಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಗೆ ಹಾನಿ

ಉತ್ತರಕನ್ನಡ ಜಿಲ್ಲೆಯಲ್ಲಿ ನೆರೆ ಸೃಷ್ಟಿಸಿದ ಮಳೆ- ತೋಟ, ಗದ್ದೆಗಳು ಸೇರಿದಂತೆ ಒಟ್ಟು 68.52 ಹೆಕ್ಟೇರ್ ಕೃಷಿ ಭೂಮಿ ಹಾನಿ, ಐವರು ಸಾವು - ಸರ್ಕಾರದ ಭರವಸೆ ಈಡೇರದ್ದಕ್ಕೆ ಜನರ ಆಕ್ರೋಶ

heavy-rain-kills-five-people-in-uttar-kannada
ಉತ್ತರಕನ್ನಡದಲ್ಲಿ ಮಳೆ ಅವಾಂತರಕ್ಕೆ ಐವರು ಸಾವು; 600ಕ್ಕೂ ಹೆಚ್ಚು ಮನೆಗಳಿಗೆ ಹಾನಿ

By

Published : Jul 23, 2022, 7:59 AM IST

Updated : Jul 23, 2022, 1:48 PM IST

ಕಾರವಾರ(ಉತ್ತರಕನ್ನಡ):ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರಿಸಿದ ಮಳೆಗೆ ನದಿಗಳು ಉಕ್ಕಿ ಹರಿದು ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಸದ್ಯ ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ನೆರೆಯೂ ಇಳಿದಿದೆ. ಆದರೆ ಮಳೆಗಾಲದಲ್ಲಿ ಪ್ರತಿ ಬಾರಿಯೂ ನೆರೆಹಾನಿ ಅನುಭವಿಸುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕರಾವಳಿಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹೊನ್ನಾವರ, ಕುಮಟಾ ತಾಲೂಕುಗಳಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಕರಾವಳಿ ಹಾಗೂ ಘಟ್ಟದ ಮೇಲೆ ಸುರಿದ ಧಾರಾಕಾರ ಮಳೆಗೆ ಕುಮಟಾ ತಾಲೂಕಿನ ಅಘನಾಶಿನಿ, ಹೊನ್ನಾವರ ತಾಲೂಕಿನ ಬಡಗಣಿ ನದಿ, ಗುಂಡಬಾಳ ಹೊಳೆ ಹಾಗೂ ಶರಾವತಿ ನದಿ ಮೈದುಂಬಿ ಹರಿದಿದ್ದವು. ಪರಿಣಾಮ ನದಿಪಾತ್ರದ ಹತ್ತಾರು ಗ್ರಾಮಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಡಕೆ ತೋಟಕ್ಕೆ ನುಗ್ಗಿದ ಮಳೆ ನೀರು

ಐವರು ಸಾವು:ಕಳೆದ ಜೂನ್ 1ರಿಂದ ಇದುವರೆಗೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಸುಮಾರು 24 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 94 ಮನೆಗಳಿಗೆ ಗಂಭೀರ ಹಾನಿ ಉಂಟಾಗಿದೆ. ಉಳಿದಂತೆ ಸುಮಾರು 508 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಅಲ್ಲದೇ ಮಳೆ ಕಾರಣದಿಂದ ಹಳಿಯಾಳದಲ್ಲಿ 3, ಹೊನ್ನಾವರ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ತಲಾ ಓರ್ವರು ಸೇರಿ ಜಿಲ್ಲೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.

ಕೃಷಿ ಭೂಮಿಗೆ ಹಾನಿ: ನದಿಗಳು ಉಕ್ಕಿ ಹರಿದು ಸೃಷ್ಟಿಸಿದ ನೆರೆಯಿಂದಾಗಿ ತೋಟ, ಗದ್ದೆಗಳು ಸೇರಿದಂತೆ ಒಟ್ಟೂ 68.52 ಹೆಕ್ಟೇರ್ ಕೃಷಿ ಭೂಮಿಗೆ ಹಾನಿ ಉಂಟಾಗಿದೆ. ಜಿಲ್ಲೆಯಾದ್ಯಂತ ಇದುವೆರೆಗ ಸುಮಾರು 6 ಜಾನುವಾರುಗಳು ಮಳೆಯಬ್ಬರಕ್ಕೆ ಸಾವನ್ನಪ್ಪಿವೆ. ಸತತ ಮಳೆಯಿಂದ ಕಾರವಾರ ಜೋಯಿಡಾ ನಡುವಿನ ಹೆದ್ದಾರಿಯ ಅಣಶಿಘಟ್ಟದಲ್ಲಿ ಮಣ್ಣು ಕುಸಿದು ಮರಗಳು ಸಹ ಉರುಳಿದ್ದು ಸಂಚಾರ ಬಂದ್​ ಆಗಿತ್ತು. ಹೊನ್ನಾವರದ ಗೇರುಸೊಪ್ಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಸ್ತೆಯಂಚಿನ ಮಣ್ಣು ಕುಸಿದು ರಸ್ತೆಗೆ ಹಾನಿಯಾಗಿದ್ದು, ಸದ್ಯ ಸಂಚಾರ ಬಂದ್ ಮಾಡಲಾಗಿದೆ.

ಉತ್ತರಕನ್ನಡದಲ್ಲಿ ಮಳೆ ಅವಾಂತರ

ಈ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಕಂದಾಯ ಸಚಿವ ಆರ್.ಅಶೋಕ್ ನೆರೆ ಆತಂಕದ ಪ್ರದೇಶಗಳಲ್ಲಿ ಫ್ಲಡ್ ಶೆಲ್ಟರ್‌ಗಳನ್ನ ನಿರ್ಮಿಸಿ ಮಳೆಗಾಲದಲ್ಲಿ ಜನರಿಗೆ ಆಶ್ರಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅದರ ನಿರ್ಮಾಣವಾಗದಿರೋದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಸ್ತೂರಿ ರಂಗನ್ ವರದಿ ಒಪ್ಪದಿರಲು ಸಂಪುಟ ಸಭೆಯಲ್ಲಿ ತೀರ್ಮಾನ: ಜೆ.ಸಿ. ಮಾಧುಸ್ವಾಮಿ

Last Updated : Jul 23, 2022, 1:48 PM IST

ABOUT THE AUTHOR

...view details