ಶಿರಸಿ:ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಶಿರಸಿ ತಾಲೂಕಿನಲ್ಲಿ ಕೆರೆಯ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ. ಜೊತೆಗೆ ಶಿರಸಿ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಪ್ರಮುಖ ಮಾರ್ಗಗಳ ಸಂಪರ್ಕ ಕಡಿತಗೊಂಡಿದೆ.
ಶಿರಸಿ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬನವಾಸಿಯ ಹೆಬ್ಬಳ್ಳಿ, ಕಲಕರಡಿ, ಅಂಡಗಿ, ಹೆಬ್ಬತ್ತಿ, ರಂಗಾಪುರ, ಸಂತೊಳ್ಳಿ, ಹಾಡಲಗಿ, ಗುಡ್ನಾಪುರ, ಮಧುರವಳ್ಳಿ ಮತ್ತಿತರ ಕಡೆ ಶುಂಠಿ, ಬಾಳೆ, ಅನಾನಸ್, ಜೋಳ ಹಾಗೂ ಅಡಕೆ ತೋಟಗಳು ಜಲವೃತ್ತಗೊಂಡಿವೆ. ಶಿರಸಿ - ಸಿದ್ದಾಪುರ, ಶಿರಸಿ-ಕುಮಟಾ ಸಂಪರ್ಕ ಕಡಿತಗೊಂಡಿದೆ.
ಗ್ರಾಮೀಣ ಭಾಗಗಳಾದ ಕೆಂಗ್ರೆ, ಪಟ್ಟಣಹೊಳೆ ಸೇತುವೆ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಕಕ್ಕಳ್ಳಿ ಸಮೀಪ ಮರ ಬಿದ್ದ ಪರಿಣಾಮ ವಾನಳ್ಳಿ-ಕಕ್ಕಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು, ಶಿರಸಿ ನಗರದ ರಾಮನತಗ್ಗು, ಪಡ್ತಿಗಲ್ಲಿ ಹಾಗೂ ಭೂತೇಶ್ವರ ಕಾಲೋನಿಯ ಕೆಲ ಮನೆಯ ಆವರಣಕ್ಕೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.