ಕಾರವಾರ: ಕಳೆದ ಕೆಲ ದಿನಗಳಿಂದ ಬಿರು ಬಿಸಿಲಿನಿಂದ ಕೂಡಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಇಂದು ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ.
ಕಾರವಾರದ ಹೈ ಚರ್ಚ್, ಹಬ್ಬುವಾಡ, ರಾಷ್ಟ್ರೀಯ ಹೆದ್ದಾರಿ 66 ರ ಅರಗಾ ಬಳಿಯ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಉಳಿದಂತೆ ಕರಾವಳಿಯ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ. ಜೊತೆಗೆ ಘಟ್ಟದ ಮೇಲ್ಭಾಗದ ಶಿರಸಿ, ಸಿದ್ದಾಪುರದಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ.