ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಇಂದು ಮುಂಜಾನೆಯಿಂದಲೇ ಮತ್ತೆ ಅಬ್ಬರ ಶುರು ಮಾಡಿದ್ದು, ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದೆ.
ಉತ್ತರ ಕನ್ನಡದಲ್ಲಿ ಅಬ್ಬರಿಸುತ್ತಿದ್ದಾನೆ ಮಳೆರಾಯ, ಆತಂಕದಲ್ಲಿ ನದಿ ಪಾತ್ರದ ಜನ - ಕಾರವಾರದಲ್ಲಿ ಮಳೆ ಸುದ್ದಿ
ಕಳೆದ ಕೆಲ ದಿನಗಳಿಂದ ಉತ್ತರ ಕನ್ನಡದಲ್ಲಿ ಬಿಡುವು ನೀಡಿದ್ದ ವರ್ಷಧಾರೆ, ಇಂದು ಮುಂಜಾನೆಯಿಂದ ಮತ್ತೆ ಸುರಿಯಲು ಪ್ರಾರಂಭಿಸಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ವಾರದ ಹಿಂದೆ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಅಬ್ಬರಿಸಿದ್ದ ಮಳೆ ಬಳಿಕ ಕಡಿಮೆಯಾಗಿ ಬಿಸಿಲಿನ ವಾತಾವರಣ ಗೋಚರವಾಗಿತ್ತು. ಆದರೆ, ಇಂದು ಬೆಳಗ್ಗೆಯಿಂದಲೇ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ ಸೇರಿದಂತೆ ಕರಾವಳಿ ತಾಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದೆ.
ಘಟ್ಟ ಪ್ರದೇಶವಾದ ಶಿರಸಿ, ಸಿದ್ದಾಪುರದಲ್ಲಿಯೂ ಮಳೆ ಮುಂದುವರಿದಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ವಾರದ ಹಿಂದೆ ಧಾರಕಾರವಾಗಿ ಸುರಿದ ಮಳೆಯಿಂದಾಗಿ ಕರಾವಳಿಯ ವಿವಿಧೆಡೆ ನದಿಗಳು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನ ತೊಂದರೆಗೊಳಗಾಗಿದ್ದರು. ಇದೀಗ ಮತ್ತೆ ಮಳೆ ಅಬ್ಬರ ಜೋರಾಗಿದ್ದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.