ಕಾರವಾರ:ರಾಜ್ಯದಲ್ಲಿ ಕೆಲವೆಡೆ ಮುಂಗಾರು ಕ್ಷೀಣವಾಗಿದ್ದರೆ, ಕರಾವಳಿ ಜಿಲ್ಲೆಗಳು ಹಾಗೂ ಘಟ್ಟದ ಮೇಲ್ಭಾಗದ ಕೆಲವು ತಾಲೂಕುಗಳಲ್ಲಿ ವರ್ಷಧಾರೆ ಬಿರುಸು ಪಡೆದಿದೆ. ಮಂಗಳವಾರ ಸುರಿದ ಭಾರಿ ಮಳೆಗೆ ಭಟ್ಕಳ, ಕಾರವಾರದ ಬಳಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಿದೆ.
ಕಾರವಾರದಲ್ಲಿ ಮಂಗಳವಾರ ಸಂಜೆ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಜಡಿ ಮಳೆಗೆ ನಗರದ ಗ್ರೀನ್ ಸ್ಟ್ರೀಟ್ ರಸ್ತೆ, ಹೈಚರ್ಚ್ ಬಳಿ, ಹಬ್ಬುವಾಡ ರಸ್ತೆ, ಪದ್ಮನಾಭನಗರ ಜಲಾವೃತಗೊಂಡಿತು. ಹಬ್ಬುವಾಡದ ಬಳಿ ಬಸ್ ಡಿಪೋಗೆ ನೀರು ನುಗ್ಗಿತು. ಅರಗಾದ ಬಳಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಪ್ರಯಾಣಿಕರು ಸಂಚಾರ ನಡೆಸಲು ಪರದಾಡಿದರು.
ಭಟ್ಕಳದಲ್ಲಿ ಮಳೆಯಾಯಿಂದಾಗಿ ರಂಗೀಕಟ್ಟೆ, ಶಂಶುದ್ಧೀನ್ ಸರ್ಕಲ್, ಮಣ್ಕುಳಿ ಭಾಗದ ರಾಷ್ಟ್ರೀಯ ಹೆದ್ದಾರಿ ತುಂಬ ನೀರು ತುಂಬಿಕೊಂಡಿದೆ. ದ್ವಿಚಕ್ರ ವಾಹನಗಳು, ಲಘು ವಾಹನಗಳ ಸೈಲೆನ್ಸರ್ ಒಳಗೆ ನೀರು ನುಗ್ಗಿ ಬಂದ್ ಆದ ಪ್ರಸಂಗವೂ ನಡೆಯಿತು.
ತೀರದ ಸಮಸ್ಯೆ:ಮಳೆಯಿಂದಾಗಿ ಕಳೆದ ವರ್ಷ ಕೋಗ್ತಿ ಬೈಲಿನ ಪ್ರದೇಶ ತೀವ್ರ ತೊಂದರೆಗೀಡಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದ್ದರು. ಸಹಾಯಕ ಆಯುಕ್ತರು ಪರಿಶೀಲಿಸಿ ಐಆರ್ಬಿ ಇಂಜಿನಿಯರ್‌ಗಳನ್ನು ಕರೆಯಿಸಿ ರಂಗೀಕಟ್ಟೆಯಲ್ಲಿರುವ ಮೋರಿಯನ್ನು ಸ್ವಚ್ಚಗೊಳಿಸುವುದು ಸೂಚಿಸಿದ್ದರು. ವರ್ಷ ಕಳೆದರೂ ಇಲ್ಲಿ ಯಾವುದೇ ಕಾಮಗಾರಿ ನಡೆಯದ ಕಾರಣ ಈ ಬಾರಿ ಮತ್ತೆ ನೀರು ನುಗ್ಗಿದೆ. ಮಳೆ ಮುಂದುವರಿದರೆ ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆ ಇದ್ದು, ಅಧಿಕಾರಿಗಳು ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಹೊನ್ನಾವರ ತಾಲೂಕಿನ ಗುಣವಂತೆ ನಾಜಗಾರ, ಮಂಕಿ ಕಾಸರಕೋಡ ಭಾಗದಲ್ಲೂ ನೀರು ನಿಂತಿದೆ. ಮೊಲ್ಕೋಡ ಗ್ರಾಮದ ಮಣಿಕಂಠ, ಪ್ರಭಾತ್ನಗರದ ಪ್ರಕಾಶ ಮೇಸ್ತ್, ಮಂಕಿ ಬಣಸಾಲೆಯ ಗಣಪತಿ ಸೋಮಯ್ಯ ನಾಯ್ಕ ಅವರ ಮನೆಗಳ ಮೇಲೆ ಮರ ಹಾನಿ ಉಂಟಾಗಿದೆ. ಕಂದಾಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ ರವಿರಾಜ ದಿಕ್ಷೀತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.