ಕಾರವಾರ:'ಮಲ್ಲಿಗೆ ನಗರಿ' ಭಟ್ಕಳದಲ್ಲಿ ದಾಖಲೆ ಪ್ರಮಾಣದಲ್ಲಿ ವರುಣದೇವ ಅಬ್ಬರಿಸುತ್ತಿದ್ದು, ಜನರನ್ನು ತೊಂದರೆಯಲ್ಲಿ ಸಿಲುಕಿಸಿದ್ದಾನೆ. ಪಟ್ಟಣದ ಕೆಲ ಪ್ರದೇಶಗಳು ಜಲಾವೃತಗೊಂಡಿದೆ. ಶರಾಬಿ ನದಿ ಉಕ್ಕಿ ಹರಿಯುತ್ತಿದೆ.
ಕಳೆದ ರಾತ್ರಿಯಿಂದ ಕರಾವಳಿಯ ತಾಲೂಕುಗಳಲ್ಲಿ ಅಧಿಕ ವರ್ಷಧಾರೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಭಟ್ಕಳದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಸಂಶುದ್ದೀನ್ ವೃತ್ತ, ರಂಗಿನಕಟ್ಟೆ, ಶಿರಾಲಿ ಸೇರಿದಂತೆ ಇತರೆಡೆ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಹೊಳೆಯಂತಾಗಿರುವ ಹೆದ್ದಾರಿಯಲ್ಲಿ ಸವಾರರು ವಾಹನಗಳನ್ನು ಓಡಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇತ್ತು. ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ರೀತಿ ಹೆದ್ದಾರಿಯಲ್ಲಿ ನೀರು ನಿಲ್ಲುವಂತಾಗಿದೆ ಎನ್ನಲಾಗುತ್ತಿದೆ. ಇದರಿಂದಾಗಿ ರಸ್ತೆ ಪಕ್ಕದ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿತು.
ನಾಳೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು ವಿದ್ಯಾರ್ಥಿಗಳು ಶಾಲೆಗಳಿಗೆ ಬರಲಿದ್ದಾರೆ. ಹೆದ್ದಾರಿಯಲ್ಲಿ ನಿಂತಿರುವ ಕೆಸರು ನೀರು ಮಕ್ಕಳ ಮೈಮೇಲೆ ಚೆಲ್ಲುವ ಸಾಧ್ಯತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಭಟ್ಕಳದ ಮುಂಡಳ್ಳಿ, ಚೌಥನಿ, ಹೊಸ್ಮನೆ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳಿಗೆ ಹಾನಿಯಾಗಿದೆ.