ಕಾರವಾರ:ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ವರುಣಾರ್ಭಟ ಜೋರಾಗಿದೆ. ಐದು ದಿನಗಳ ಕಾಲ ರೆಡ್ ಹಾಗೂ ಆರೆಂಜ್ ಅಲರ್ಟ್ ನೀಡಲಾಗಿದ್ದ ಬೆನ್ನಲ್ಲೇ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಕಾರವಾರ ನಗರದಲ್ಲಿ ಮಳೆಯ ಅಬ್ಬರಕ್ಕೆ ಜನವಸತಿ ಪ್ರದೇಶಗಳ ನಿವಾಸಿಗಳು ಪರದಾಡುವಂತಾಗಿದೆ.
ಕಾರವಾರದ ಹಬ್ಬುವಾಡ, ಸೋನಾರವಾಡ, ಹೈಚರ್ಚ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ನದಿಯಂತೆ ಹರಿದು ಬಂದಿದ್ದು ರಸ್ತೆಗಳು ಜಲಾವೃತಗೊಂಡಿದ್ದವು. ಮಳೆಯ ನೀರು ಕಾಲುವೆಗಳಲ್ಲಿ ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದ್ದು ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಯಿತು. ಮಳೆಗಾಲಕ್ಕೆ ಮುನ್ನ ನಗರಸಭೆ ವತಿಯಿಂದ ಕಾಲುವೆಗಳನ್ನು ಸ್ವಚ್ಛಗೊಳಿಸದಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನಸಾಮಾನ್ಯರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.