ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಎಡೆ ಬಿಡದೆ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಹತ್ತಾರು ಮನೆಗಳು ಧರೆಗುರುಳಿವೆ. ರಕ್ಕಸ ಅಲೆಗಳಿಗೆ ಕಡಲತೀರಗಳು ಕೊಚ್ಚಿ ಹೋಗಿ ಬಲೆ, ಬೋಟ್ಗಳಿಗೆ ಸಾಕಷ್ಟು ಹಾನಿಯಾಗಿದೆ.
ನಿರಂತರ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿ ಸಾವಿರಾರು ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ನದಿತೀರದ ಪ್ರದೇಶಗಳು ಜಲಾವೃತಗೊಂಡು ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಉತ್ತರಕನ್ನಡದಲ್ಲಿ ಪ್ರವಾಹದ ಭೀತಿ ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲ್ಭಾಗದ ಜೋಯಿಡಾ, ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ಕರಾವಳಿ ತಾಲೂಕುಗಳಲ್ಲಿ ದಿನವಿಡೀ ಎಡಬಿಡದೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಯಥೇಚ್ಛವಾಗಿ ನೀರು ಹರಿದು ಬರಲಾರಂಭಿಸಿದೆ. ಇದೇ ಕಾರಣಕ್ಕೆ ಕಾಳಿ ನದಿಗೆ ನಿರ್ಮಿಸಲಾಗಿದ್ದ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ.
ಕೊಡಸಳ್ಳಿ ಜಲಾಶಯದ 4 ಗೇಟ್‌ಗಳ ಮೂಲಕ 22,393 ಕ್ಯೂಸೆಕ್ ಹಾಗೂ ಕದ್ರಾ ಜಲಾಶಯದಿಂದ ಒಟ್ಟು 8 ಗೇಟ್‌ಗಳ ಮೂಲಕ 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಬಿಡಲಾಗಿದೆ. ಪರಿಣಾಮ ಕಾಳಿ ನದಿ ತೀರದ ಮಲ್ಲಾಪುರ ಚರ್ಚ್ ವಾಡ, ಕದ್ರಾ, ಮಹಮ್ಮಾಯಿ ದೇವಸ್ಥಾನ ವ್ಯಾಪ್ತಿಯಲ್ಲಿ ನೀರು ತುಂಬಿ ನೆರೆಯಂತಾಗಿದೆ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆಯ ಅಬ್ಬರಕ್ಕೆ ಕಡಲತೀರಗಳಲ್ಲಿ ಮೀನುಗಾರರ ಬಲೆ ಬೋಟ್ಗಳು ಕೊಚ್ಚಿ ಹೋಗಿವೆ. ಜಿಲ್ಲೆಯಾದ್ಯಂತ 18 ಮನೆಗಳು ಸಂಪೂರ್ಣ ಕುಸಿದಿದ್ದು, 200 ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಮಳೆಯಿಂದಾಗಿ ಯಲ್ಲಾಪುರ ಹಾಗೂ ಶಿರಸಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದೀಗ ಜಿಲ್ಲೆಯಲ್ಲಿ ಬೇಸಾಯ ನಡೆಯುತ್ತಿದ್ದು, ಮಳೆ ಕೂಡ ಅಗತ್ಯವಾಗಿದೆ. ಆದರೆ ಮಳೆ ಜೋರಾದಾಗ ಹಾನಿಗೊಳಗಾಗಿ ಸಂಕಷ್ಟ ಸಿಲುಕಿದವರಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸುತ್ತಿದೆ. 2019ರಲ್ಲಿ ಪ್ರವಾಹ ಸೃಷ್ಟಿಯಾದ ಕಾರಣ ಜಲಾಶಯಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದ್ದು, ನೀರಿನ ಒಳ ಹರಿವು ಆಧರಿಸಿ ಕದ್ರಾ ಸೇರಿದಂತೆ ಇತರೆ ಜಲಾಶಯಗಳಿಂದ ಹಂತ-ಹಂತವಾಗಿ ನೀರು ಹೊರ ಬಿಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಜುಲೈ 24ರವರೆಗೂ ಮಳೆ ಮುಂದುವರಿಯುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನದಿ ತೀರದ ಜನರಲ್ಲಿ ಪ್ರವಾಹ ಸೃಷ್ಟಿಯಾಗುವ ಆತಂಕ ಎದುರಾಗಿದೆ.