ಶಿರಸಿ:ಶನಿವಾರ ಸುರಿದ ಭಾರೀ ಮಳೆಗೆ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ತಾಸಿಗೂ ಅಧಿಕ ಕಾಲ ಸಂಚಾರ ಅಸ್ತವ್ಯಸ್ಥವಾಗಿ ಜನರು ಓಡಾಡಲು ತೊಂದರೆ ಅನುಭವಿಸುವಂತಾಯಿತು.
ಶಿರಸಿಯಲ್ಲಿ ಭಾರೀ ಮಳೆ: ಹೆದ್ದಾರಿಯಲ್ಲಿ ನೀರು ನಿಂತು ಜನರ ಪರದಾಟ - heavy rain in sirsi
ಕಳೆದ ಮೂರು ವಾರಗಳ ಹಿಂದೆ ಚರಂಡಿ ಮುಚ್ಚಿದ ಪರಿಣಾಮ ಸ್ಥಳೀಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ರಾಜ್ಯ ಹೆದ್ದಾರಿಯ ಆಶಾ ಪ್ರಭು ಆಸ್ಪತ್ರೆಯ ಬಳಿಯಿದ್ದ ಚರಂಡಿಯನ್ನು ಖಾಸಗಿ ವ್ಯಕ್ತಿಗಳು ಹಾಗೂ ಆಸ್ಪತ್ರೆಯವರು ಸೇರಿ ಮುಚ್ಚಿದ ಪರಿಣಾಮ ಕಳೆದ ಹಲವು ದಿನಗಳಿಂದ ಈ ಸಮಸ್ಯೆ ಉದ್ಭವಿಸುತ್ತಿದ್ದು, ಇಂದು ಸುರಿದ ಮಳೆಗೆ ರಸ್ತೆಯ ತುಂಬಾ ನೀರು ನಿಂತು ಜನ ಸಂಚಾರಕ್ಕೂ ಸಮಸ್ಯೆಯಾಯಿತು. ಕಳೆದ ಮೂರು ವಾರಗಳ ಹಿಂದೆ ಚರಂಡಿ ಮುಚ್ಚಿದ ಪರಿಣಾಮ ಸ್ಥಳೀಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಚರಂಡಿಯನ್ನು ಸರಿಪಡಿಸುವಂತೆ ಆಗ್ರಹಿಸಿದ್ದರು.
ಆದರೆ ಆ ವಿಷಯ ನ್ಯಾಯಾಲಯದಲ್ಲಿ ಇರುವ ಕಾರಣ ತಾಲೂಕಾಡಳಿತದ ವತಿಯಿಂದ ಪಕ್ಕದಲ್ಲಿ ಇನ್ನೊಂದು ಕಾಲುವೆ ನಿರ್ಮಿಸಲಾಗಿತ್ತು. ಆದರೆ ಅತಿಯಾದ ಮಳೆಯಾದ ಕಾರಣ ಸಣ್ಣ ಕಾಲುವೆ ತುಂಬಿ ನೀರು ಉಕ್ಕಿ ರಸ್ತೆಯ ಮೇಲೆ ಹರಿದಿದ್ದು, ಸಣ್ಣ ಪ್ರಮಾಣದಲ್ಲಿ ಅಕ್ಕಪಕ್ಕದಲ್ಲಿರುವ ಮನೆ, ಹೋಟೆಲ್ಗಳಿಗೂ ನೀರು ನುಗ್ಗಿದೆ. ಇದರಿಂದ ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.